ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮಂಗಳೂರು ಗೋಲಿಬಾರ್, 'ದೇಶದ್ರೋಹ' ಪ್ರಕರಣ: ಕಾಂಗ್ರೆಸ್ ಸಭಾತ್ಯಾಗ

Update: 2020-02-18 13:22 GMT

ಬೆಂಗಳೂರು, ಫೆ. 18: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧದ ಪ್ರತಿಭಟನೆ, ಮಂಗಳೂರು ಗೋಲಿಬಾರ್ ಮತ್ತು ಶಾಹೀನ್ ಶಾಲೆ ಶಿಕ್ಷಕಿ-ಬಾಲಕಿ ತಾಯಿಯ ವಿರುದ್ಧದ ದೇಶದ್ರೋಹದ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ವಿಷಯ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿ, ಬಳಿಕ ವಿಪಕ್ಷ ಕಾಂಗ್ರೆಸ್ ಸಭಾತ್ಯಾಗ ಮಾಡಿದ ಪ್ರಸಂಗವು ನಡೆಯಿತು.

ಮಂಗಳವಾರ ವಿಧಾನಸಭೆಯಲ್ಲಿ ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ನಿಲುವಳಿ ಸೂಚನೆ ಪೂರ್ವಭಾವಿಯಾಗಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ 144 ಸೆಕ್ಷನ್ ಜಾರಿಗೆ ಪೂರಕ ವಾತಾವರಣ ಇಲ್ಲದ ಹೊರತಾಗಿಯೂ ಇದ್ದಕ್ಕಿದ್ದಂತೆ ನಿಷೇಧಾಜ್ಞೆ ಜಾರಿ ಮಾಡಿರುವುದು ನಿಯಮಬಾಹಿರ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಈ ಪ್ರತಿಭಟನೆ ವೇಳೆ ಗೋಲಿಬಾರ್ ಮಾಡಿಸಿ ಇಬ್ಬರು ಅಮಾಯಕರನ್ನು ಬಲಿ ಪಡೆದಿರುವುದು ಸರಕಾರದ ರಾಕ್ಷಸಿ ಪ್ರವೃತ್ತಿಯನ್ನು ತೋರಿಸುತ್ತಿದೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಪೊಲೀಸರು ಸರಕಾರದ ಕೈಗೊಂಬೆಗಳಾಗಿದ್ದು, ಅವರು ತಮ್ಮ ವಿವೇಚನೆ ಕಳೆದುಕೊಂಡಿದ್ದಾರೆ. ಮಂಗಳೂರು ಗೋಲಿಬಾರ್ ಘಟನೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕನಾಗಿ ನಾನು ಅಲ್ಲಿಗೆ ತೆರಳಲು ಪೊಲೀಸರು ಅವಕಾಶ ನಿರಾಕರಿಸುವ ಮೂಲಕ ನನ್ನ ಹಕ್ಕನ್ನು ಮೊಟಕುಗೊಳಿಸಲಾಗಿದೆ’. ‘ನಾಟಕದಲ್ಲಿ ವಿಡಂಬನೆ ಮಾಡಿದ ಕಾರಣಕ್ಕೆ ಶಾಹೀನ್ ಶಾಲೆ ಶಿಕ್ಷಕಿ ಮತ್ತು ಬಾಲಕಿ ತಾಯಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಲಾಗಿದೆ. ಆದುದರಿಂದ ಇದು ಅತ್ಯಂತ ಗಂಭೀರವಾದ ವಿಚಾರ. ಹೀಗಾಗಿ ವಿಷಯ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ ವಿಷಯ ನಿಲುವಳಿ ಸೂಚನೆಯಡಿ ಬರುವುದಿಲ್ಲ. ಹೀಗಾಗಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಆಡಳಿತಾರೂಢ ಬಿಜೆಪಿ ಸದಸ್ಯರು ಸ್ಪೀಕರ್‌ಗೆ ಕೋರಿದರು.

‘ಸಿದ್ದರಾಮಯ್ಯ ಪ್ರಸ್ತಾಪಿಸಿದ ವಿಚಾರಗಳು ನಿಲುವಳಿ ಸೂಚನೆಯಡಿ ಬರುವುದಿಲ್ಲ. ಹೀಗಾಗಿ ಮಾರ್ಪಾಡು ಮಾಡಿ ನಿಯಮ 69ರ ಅಡಿ ನಾಳೆ ಮಧ್ಯಾಹ್ನ 3ಗಂಟೆಗೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರೂಲಿಂಗ್ ನೀಡಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಈ ರೀತಿ ಸದನ ಎಂದೂ ನಡೆದಿರಲಿಲ್ಲ. ವಿಪಕ್ಷದ ಹಕ್ಕು ಮೊಟಕುಗೊಳಿಸಲಾಗಿದೆ. ನಿಯಮಾವಳಿಗಳ ಪ್ರಕಾರ ಸದನ ನಡೆಯಬೇಕು. ನಾಳೆ ನಡೆದರೆ ವಿಷಯಕ್ಕೆ ಮಹತ್ವವಿರುವುದಿಲ್ಲ’ ಎಂದು ಚರ್ಚೆಗೆ ಪಟ್ಟು ಹಿಡಿದರು. ಇದರಿಂದ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಗದ್ದಲ ಸೃಷ್ಟಿಯಾಯಿತು. ವಿನಾಕಾರಣ ಕಾಲಹರಣ ಸರಿಯಲ್ಲ ಎಂದು ಸ್ಪೀಕರ್ ಹೇಳಿದರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ವಿಷಯ ಪ್ರಸ್ತಾಪಿಸಿದರೆ ಕಾಲಹರಣ ಎಂದರೆ ನಾವು ಇಲ್ಲಿಗೇಕೆ ಬರಬೇಕು ಎಂದು ಪ್ರಶ್ನಿಸಿದರು. ‘ಕಾಲಹರಣ’ ಪದವನ್ನು ಕಡತದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದರು. ಇದಕ್ಕೆ ಕಡತ ತರಿಸಿ ಪರಿಶೀಲಿಸುತ್ತೇನೆಂದು ಸ್ಪೀಕರ್ ಹೇಳಿದರು.

‘ಇದು ಒಳ್ಳೆಯ ನಡವಳಿಕೆಯಲ್ಲ. ವಿಪಕ್ಷಗಳ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ. ಹೀಗಾದರೆ ನಾವು ಸದನವನ್ನು ಬಹಿಷ್ಕಾರ ಮಾಡುತ್ತೇವೆ’ ಎಂದು ಘೋಷಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸದನದಿಂದ ಹೊರನಡೆದರು, ಕಾಂಗ್ರೆಸ್ ಸದಸ್ಯರು ಅವರನ್ನು ಅನುಸರಿಸಿದರು.

‘ಬಿಜೆಪಿಯವರು ಸಿಎಎ-ಎನ್‌ಆರ್‌ಸಿ ಅನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ, ಸಮಾಜದ ಹಾದಿ ತಪ್ಪಿಸಲು ಹೊರಟಿದ್ದಾರೆ. ಪೊಲೀಸ್ ಇಲಾಖೆ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಾ, ಇದನ್ನು ವಿರೋಧಿಸುವವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುತ್ತಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

‘ಅಧಿವೇಶನದಲ್ಲಿ ಸಿಎಎ, ಮಂಗಳೂರು ಗೋಲಿಬಾರ್, ಶಾಹೀನ್ ಶಾಲೆ ಪ್ರಕರಣದ ಕುರಿತು ಪ್ರತಿಪಕ್ಷಗಳಿಗೆ ಚರ್ಚೆಗೆ ಅವಕಾಶ ನೀಡದಿರುವುದು ಖಂಡನೀಯ. ಹೊರಗೆ ಪ್ರತಿಭಟನೆ ನಡೆಸಿದರೆ 144 ಸೆಕ್ಷನ್, ಸದನದ ಒಳಗೂ ಚರ್ಚೆಗೆ ಅವಕಾಶವಿಲ್ಲ, ರಾಜ್ಯದಲ್ಲಿ ಬಿಜೆಪಿ ಸರಕಾರ ಏಕಪಾತ್ರಾಭಿನಯ ನಡೆಸುತ್ತಿದೆಯೇ? ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ವಾಧಿಕಾರಿಯೇ?’

-ಕೆಪಿಸಿಸಿ ಟ್ವೀಟ್

‘ಕಾಂಗ್ರೆಸ್ ಪಕ್ಷಕ್ಕೆ ಸದನ ನಡೆಯುವುದು ಬೇಕಿಲ್ಲ. ಹೀಗಾಗಿ ಸ್ಪೀಕರ್ ರೂಲಿಂಗ್ ನೀಡಿದ ನಂತರವೂ ಚರ್ಚೆಗೆ ಪಟ್ಟು ಹಿಡಿಯುವುದು ಸಲ್ಲ. ದುರುದ್ದೇಶದಿಂದಲೇ ಹೀಗೆ ಮಾಡುತ್ತಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ’

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News