ಕನಕಪುರಕ್ಕೆ ವೈದ್ಯಕೀಯ ಕಾಲೇಜು: ಸಿಎಂ ಭೇಟಿ ಮಾಡಿದ ಡಿಕೆಶಿ ನೇತೃತ್ವದ ನಿಯೋಗ

Update: 2020-02-18 14:22 GMT

ಬೆಂಗಳೂರು, ಫೆ. 18: ರಾಮನಗರ ಜಿಲ್ಲೆಯ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಪಡಿಸಿರುವ ಅದೇಶವನ್ನು ಹಿಂತೆಗೆದುಕೊಂಡು ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮರು ಆದೇಶ ಹೊರಡಿಸಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ ಶಿವಕುಮಾರ್, ದ್ವೇಷದ ರಾಜಕಾರಣ ಮಾಡುವುದಿಲ್ಲ, ಜನರ ಹಿತದೃಷ್ಟಿ ಹಾಗೂ ಅಭಿವೃದ್ಧಿ ವಿಚಾರವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದೀರಿ. ಬಸವ ತತ್ವಗಳನ್ನು ಪಾಲಿಸುವುದಾಗಿ ಹೇಳಿಕೊಳ್ಳುವ ತಾರು ಈ ಹಿಂದೆ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆಂದು ಭಾವಿಸಿದ್ದೆ. ಆದರೆ ನಂತರದ ದಿನಗಳಲ್ಲಿ ತಮ್ಮ ಮಾತಿಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದೀರಿ. ಕನಕಪುರ ವೈದ್ಯಕೀಯ ವಿಜ್ಞಾನ ಕಾಲೇಜು ಆದೇಶವನ್ನು ರದ್ದುಗೊಳಿಸಿರುವುದು ಸಿಎಂ ಮಾತು ತಪ್ಪಿರುವುದಕ್ಕೆ ಸಾಕ್ಷಿ ಎಂದು ತಿಳಿಸಿದರು.

ನಂಜುಂಡಪ್ಪ ಸಮಿತಿ ಕನಕಪುರವನ್ನು ಹಿಂದುಳಿದ ತಾಲೂಕು ಎಂದು ಪರಿಗಣಿಸಿದ ಹಿನ್ನೆಲೆಯಲ್ಲಿ, ಅಭಿವೃದ್ಧಿ ಹಾಗೂ ಈ ಭಾಗದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಮೂಲಸೌಕರ್ಯ ಹೆಚ್ಚಿಸಲು ಹಾಗೂ ಈ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ತಲುಪುವಂತೆ ಮಾಡಲು ಹಿಂದಿನ ಸರಕಾರ 2018-19ನೆ ಸಾಲಿನ ಬಜೆಟ್‌ನಲ್ಲಿ ಕನಕಪುರ ವೈದ್ಯಕೀಯ ಕಾಲೇಜಿಗೆ ಅನುಮೋದನೆ ನೀಡಿತ್ತು.

ಈ ವಿಚಾರವಾಗಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಆಗಿನ ವಿಪಕ್ಷದ ನಾಯಕರಾಗಿದ್ದ ನೀವು ನಿಮ್ಮ ಅಭಿಪ್ರಾಯ ಹಾಗೂ ಒಪ್ಪಿಗೆಯನ್ನೂ ಸೂಚಿಸಿದ್ದಿರಿ. ನಂತರ ಯೋಜನಾ ಇಲಾಖೆ, ಆರ್ಥಿಕ ಇಲಾಖೆ, ಕಾನೂನು ಮತ್ತು ಸಂಸದೀಯ ಇಲಾಖೆ ಈ ಪ್ರಸ್ತಾವನೆ ಪರಿಶೀಲಿಸಿ 2018ರ ಡಿಸೆಂಬರ್ 13ರಂದು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಅನಂತರ ಮೆಡಿಕಲ್ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಕನಕಪುರದ ರಾಯಸಂಧ್ರ ಹಳ್ಳಿಯಲ್ಲಿ 25 ಎಕರೆ ಜಮೀನು ನಿಗದಿ ಮಾಡಲಾಗಿತ್ತು. ನಂತರ ಟೆಂಡರ್ ಕರೆದು ಗುದ್ದಲಿ ಪೂಜೆ ಮಾತ್ರ ಬಾಕಿ ಉಳಿದಿತ್ತು. ಈ ಹಂತದಲ್ಲಿರುವ ಯೋಜನೆಯನ್ನು ನಿಮ್ಮ ಏಕವ್ಯಕ್ತಿ ಸಂಪುಟ ಹಿಂಪಡೆದು ಹಿಂದಿನ ಸರಕಾರದ ಆದೇಶ ರದ್ದುಗೊಳಿಸಿ ಯೋಜನೆಯನ್ನು ರಾತ್ರೋರಾತ್ರಿ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿರುವುದು ನನಗೆ ಅಚ್ಚರಿ ತಂದಿದೆ.

ಸಾರ್ವಜನಿಕ ವೇದಿಕೆಯಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ ನೀವು ಇಂತಹ ನಿರ್ಧಾರ ಕೈಗೊಂಡಿರುವುದು ನನ್ನ ಮನಸ್ಸಿಗೆ ನೋವು ತಂದಿದೆ. ಯಾವುದೇ ಬೇರೆ ಕ್ಷೇತ್ರಕ್ಕೆ ನೀಡಿದ್ದ ಕಾಲೇಜನ್ನು ರದ್ದುಗೊಳಿಸಿ ಕನಕಪುರಕ್ಕೆ ಕಾಲೇಜು ಅನುಮೋದನೆ ನೀಡಿರಲಿಲ್ಲ ಎಂದು ನಿಮಗೆ ನೆನಪಿಸಲು ಇಚ್ಛಿಸುತ್ತೇನೆ ಎಂದು ಅವರು ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡಿರುವ ಬಗ್ಗೆ ನಾನು ಯಾವುದೇ ಪ್ರಶ್ನೆ ಮಾಡುವುದಿಲ್ಲ. ಸರಕಾರ ತನಗೆ ಇಚ್ಛೆ ಬಂದ ಪ್ರದೇಶಗಳಿಗೆ ಎಷ್ಟು ಕಾಲೇಜುಗಳನ್ನು ಬೇಕಾದರೂ ನೀಡಲಿ. ಆದರೆ, ಕನಕಪುರಕ್ಕೆ ನೀಡಲಾಗಿದ್ದ ಕಾಲೇಜನ್ನು ರದ್ದುಗೊಳಿಸಿರುವುದು ಸಲ್ಲ ಎಂಬುದು ನಮ್ಮ ವಾದ. ಇತ್ತೀಚೆಗೆ ನೀವು ಮಾಗಡಿಯಲ್ಲಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ನೀಡುವುದಾಗಿ ಕೊಟ್ಟಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಹೀಗಾಗಿ ಸರಕಾರ ಕೂಡಲೇ ಕನಕಪುರಕ್ಕೆ ನೀಡಲಾಗಿದ್ದ ಕಾಲೇಜನ್ನು ಮರು ಮಂಜೂರು ಮಾಡಬೇಕು. ಅಲ್ಲದೆ ಕಾಲೇಜು ಕಟ್ಟಡ ನಿರ್ಮಾಣದ ಭೂಮಿ ಪೂಜೆಗೆ ದಿನಾಂಕ ನಿಗದಿಪಡಿಸಬೇಕು. ಸರಕಾರ ಈ ವಿಚಾರದಲ್ಲಿ ದ್ವೇಷದ ರಾಜಕಾರಣ ಮುಂದುವರಿಸಿದರೆ, ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಕನಕಪುರ ಜನರಿಗೆ ನ್ಯಾಯ ದೊರಕಿಸಿಕೊಡಲು ನನ್ನದೇ ಮಾರ್ಗ ಅನುಸರಿಸಬೇಕಾಗುತ್ತದೆ. ಇದಕ್ಕೆ ನೀವು ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News