ಮೆಡಿಕಲ್ ಸೀಟು ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ

Update: 2020-02-18 14:33 GMT

ಬೆಂಗಳೂರು, ಫೆ.18: ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣಕ್ಕಾಗಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ, ವಂಚನೆ ಮಾಡುತ್ತಿದ್ದ ಆರೋಪಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೋಲ್ಕತ್ತಾ ಪ್ರಾಂತಿಕ್ ಪಲ್ಲಿಯ ಶೈಲೇಶ್ ಕೊತಾರಿ (48) ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನಿಂದ 2 ಲಕ್ಷ ರೂ. ನಗದು, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಎರಡು ಆಧಾರ್‌ಕಾರ್ಡ್‌ ಗಳನ್ನು ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬಂಧಿತ ಆರೋಪಿಯು, ಗೌರೀಶ್ ಕುಮಾರ್ ಗಾಗಾ (37) ಎಂದು ಕೊಲ್ಕತ್ತಾದ ನ್ಯೂ ಆಲಿಪೋರ್ನ ಟೋಲಿಗುಂಗೆ ರಸ್ತೆಯಲ್ಲಿ ವಾಸಿಸುವುದಾಗಿ ಆಧಾರ್ ಕಾರ್ಡ್ ಪಡೆದಿದ್ದರೆ, ನಗರದ ಶಿವಾಜಿನಗರದಲ್ಲಿನ ಸೆಪ್ಪಿಂಗ್ಸ್ ರಸ್ತೆಯಲ್ಲಿ ವಾಸಿಸುತ್ತಿರುವ ಶೈಲೇಶ್ ಕೊತಾರಿ ಎಂಬ ಹೆಸರಿನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ್ದ. ಬಳಿಕ ಪ್ರತಿಷ್ಠಿತ ಪತ್ರಿಕೆಗಳಲ್ಲಿ ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣ ಕೋರ್ಸ್‌ಗಳಲ್ಲಿ ಸೀಟು ಕೊಡಿಸುತ್ತೇನೆ ಎಂದು ಜಾಹೀರಾತು ನೀಡುತ್ತಿದ್ದ. ಇದನ್ನು ನಂಬಿ ಬೂಬೇಶ್ ಭಾರತಿ ಎಂಬಾತ ಆರೋಪಿಯನ್ನು ಸಂಪರ್ಕಿಸಿದಾಗ ಚೆನ್ನೈನ ಭಾರತ್ ವಿಶ್ವವಿದ್ಯಾನಿಲಯದಲ್ಲಿ ಬಿ-ಟೆಕ್, ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ನಂಬಿಸಿ 1 ಲಕ್ಷ 70 ಸಾವಿರ ಹಣವನ್ನು ಪಡೆದು ಮೋಸ ಮಾಡಿದ್ದ. ಈ ಬಗ್ಗೆ ತಮಿಳುನಾಡಿನ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿದ್ದು, ತನಿಖೆ ನಡೆಸಿದ ವಿಶೇಷ ವಿಚಾರಣಾ ದಳದ ಸಿಬ್ಬಂದಿಯು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News