ಭಯೋತ್ಪಾದಕರ ಮನೆಗೆ ನಾವು ಹೋಗಬೇಕಾ?: ಗೋಲಿಬಾರ್ ನಲ್ಲಿ ಮೃತಪಟ್ಟವರ ಬಗ್ಗೆ ವಿ.ಪರಿಷತ್ ಬಿಜೆಪಿ ಸದಸ್ಯ

Update: 2020-02-18 15:45 GMT

ಬೆಂಗಳೂರು, ಫೆ. 18: ಮಂಗಳೂರಿನ ಗೋಲಿಬಾರ್‌ನಿಂದ ಮೃತಪಟ್ಟ ಭಯೋತ್ಪಾದಕರ ಮನೆಗಳಿಗೆ ನಾವು ಹೋಗಬೇಕಾ ಎಂದು ಬಿಜೆಪಿ ಸದಸ್ಯ ರವಿಕುಮಾರ್ ನೀಡಿದ ಹೇಳಿಕೆಗೆ ವಿಪಕ್ಷ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಮಂಗಳವಾರ ವಿಧಾನಪರಿಷತ್ತಿನಲ್ಲಿ ಊಟದ ವಿರಾಮದ ಬಳಿಕ ಆರಂಭವಾದ ಸದನದಲ್ಲಿ ಪರಿಷತ್ತಿನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಐವಾನ್ ಡಿಸೋಜಾ, ಗೋಲಿಬಾರ್‌ನಲ್ಲಿ ಮೃತಪಟ್ಟವರ ಮನೆಗಳಿಗೆ ಸಿಎಂ, ಉಸ್ತುವಾರಿ ಸಚಿವ, ಶಾಸಕರು ಯಾರೂ ಸೌಜನ್ಯಕ್ಕಾದರೂ ಭೇಟಿಯಾಗಿಲ್ಲ ಎಂದು ಆಪಾದಿಸಿದರು.

ಈ ವೇಳೆ ಎದ್ದು ನಿಂತ ಬಿಜೆಪಿ ಸದಸ್ಯ ರವಿಕುಮಾರ್, ಮೃತಪಟ್ಟ ಭಯೋತ್ಪಾದಕರ ಮನೆಗಳಿಗೆ ನಾವು ಹೋಗಬೇಕಾ. ಯಾರ ಮನೆಗೆ ಹೋಗಬೇಕು, ಹೋಗಬಾರದು ಎಂದು ತಿಳಿದಿದೆ ಎಂದು ಹೇಳಿದರು. ಕೂಡಲೇ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು, ರವಿಕುಮಾರ್‌ರ ಮಾತಿಗೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸಭಾಪತಿ ಪ್ರತಾಪ್ ಚಂದ್ರ ಅರ್ಧಗಂಟೆ ಸದನವನ್ನು ಮುಂದೂಡಿದರು.

ರವಿಕುಮಾರ್

ಕ್ಷಮೆಯಾಚನೆ: ಸದನ ಮರು ಆರಂಭವಾದ ಕೂಡಲೇ ವಿಪಕ್ಷ ಸದಸ್ಯರು ಎಲ್ಲರೂ ಸದನದ ಬಾವಿಗಿಳಿದು ರವಿಕುಮಾರ್ ಕ್ಷಮೆಯಾಚಿಸಲೇಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ರವಿಕುಮಾರ್, ನಾನು ಮೃತರನ್ನು ಉದ್ದೇಶವಿಟ್ಟುಕೊಂಡು ಸದನದಲ್ಲಿ ಈ ಹೇಳಿಕೆ ನೀಡಿಲ್ಲ. ಒಂದು ವೇಳೆ ಹಾಗೆ ಅರ್ಥವಾಗಿದ್ದರೆ ನನ್ನ ಮಾತಿಗೆ ಕ್ಷಮೆಯಾಚಿಸುವೆ. ಅಲ್ಲದೆ, ಈ ಪದವನ್ನು ಕಡತದಿಂದ ತೆಗೆದು ಹಾಕಬೇಕು ಎಂದು ಮನವಿ ಮಾಡಿದರು. ಅನಂತರ ಪ್ರತಿಭಟನೆಯನ್ನು ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News