ಕವಿ ಸಿರಾಜ್ ಬಿಸರಳ್ಳಿ ನ್ಯಾಯಾಲಯಕ್ಕೆ ಶರಣಾಗತಿ: ಪೊಲೀಸ್ ವಶಕ್ಕೆ

Update: 2020-02-18 16:38 GMT

ಗಂಗಾವತಿ, ಫೆ. 18: ಆನೆಗೊಂದಿ ಉತ್ಸವದಲ್ಲಿ ಕವನ ವಾಚನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿ ಇಂದು ಗಂಗಾವತಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ನ್ಯಾಯಾಲಯ ಮಧ್ಯಂತರ ಜಾಮೀನನ್ನು ತಿರಸ್ಕರಿಸಿ, ಫೆ.19ರ ಮಧ್ಯಾಹ್ನ 2 ಗಂಟೆವರೆಗೆ ಪೊಲೀಸ್ ವಶಕ್ಕೆ ನೀಡಿದೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತದ ಸಹಯೋಗದಲ್ಲಿ ಜ.9-10 ರಂದು ಆಯೋಜಿಸಿದ್ದ ಆನೆಗೊಂದಿ ಉತ್ಸವದಲ್ಲಿ ಸಿರಾಜ್ ಬಿಸರಳ್ಳಿ ಕವನ ವಾಚಿಸಿದ್ದರು. ಇದೇ ಕವನವನ್ನು ಸಾಮಾಜಿಕ ಜಾಲತಾಣದಲ್ಲಿ ಕನ್ನಡ ನೆಟ್.ಕಾಂನ ರಾಜಬಕ್ಷಿ ಎಂಬುವವರು ಹಂಚಿಕೊಂಡಿದ್ದರು.

ಈ ಕವನ ಸಿಎಎಗೆ ಪ್ರಧಾನಿ ಯಾವಾಗ ದಾಖಲೆಗಳನ್ನು ಒದಗಿಸುತ್ತಾರೆ ಎಂಬ ಊಹಾತ್ಮಕ ಪ್ರಶ್ನೆಯನ್ನು ಎತ್ತುತ್ತದೆ, ಸರಕಾರಿ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ದೇಶವಿರೋಧಿ ಹಾಡು ರಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ನಡುವೆ, ಫೆ. 16ರಂದು ಅಖಿಲ ಭಾರತೀಯ ವಕೀಲರ ಒಕ್ಕೂಟ ಕೊಪ್ಪಳದ ಸಿರಾಜ್ ಮತ್ತು ರಾಜಬಕ್ಷಿಯವರ ಮನೆಗೆ ತೆರಳಿ, ಸತ್ಯಶೋಧನೆ ನಡೆಸಿತ್ತು. ವಕೀಲರ ತಂಡವು ಸುದ್ದಿಗೋಷ್ಠಿಯಲ್ಲಿ ಕವಿತೆಯ ಮೇಲೆ ಕೇಸ್ ಹಾಕುವುದು ಸಂವಿಧಾನ ವಿರೋಧಿಯಾದುದು ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

ಆನೆಗೊಂದಿ ಉತ್ಸವದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಕವಿತೆ ಓದಿದ್ದಕ್ಕಾಗಿ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿ ಹಾಗೂ ಕನ್ನಡ ನೆಟ್.ಕಾಂನ ಸಂಪಾದಕರಾದ ರಾಜಬಕ್ಷಿ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ರಾಜ್ಯ ಸರಕಾರ ಈ ಕೂಡಲೇ ಹಿಂಪಡೆಯಬೇಕೆಂದು ಅಖಿಲ ಭಾರತೀಯ ವಕೀಲರ ಒಕ್ಕೂಟ ಆಗ್ರಹಿಸಿತ್ತು.

ಇಂದು ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿ ಗಂಗಾವತಿ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಫೆ.19ರ ಮಧ್ಯಾಹ್ನ 2 ಗಂಟೆವರೆಗೆ ಪೊಲೀಸ್ ವಶಕ್ಕೆ ನೀಡಿ, ಮಧ್ಯಂತರ ಜಾಮೀನನ್ನು ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News