ನ್ಯಾಯಾಧೀಶ ಲೋಯಾ ನಿಗೂಢ ಸಾವು ಪ್ರಕರಣ: ಕೂಲಂಕಶ ತನಿಖೆಗೆ ಆಗ್ರಹ

Update: 2020-02-18 17:03 GMT

ಹೊಸದಿಲ್ಲಿ, ಫೆ. 18: ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬ್ರಿಜ್‌ಗೋಪಾಲ್ ಹರಿಕೃಷ್ಣ ಲೋಯಾ ಅವರ ಸಾವಿನ ಕುರಿತು ಕೂಲಂಕುಷವಾಗಿ ತನಿಖೆ ನಡೆಸುವಂತೆ ನಾಗರಿಕರ ಗುಂಪೊಂದು ಮಂಗಳವಾರ ಆಗ್ರಹಿಸಿದೆ. ಲೋಯಾ ಅವರ ಸಾವಿನ ಕುರಿತು ಸಮಯ ಮಿತಿಯಲ್ಲಿ ತನಿಖೆ ನಡೆಸುವಂತೆ ನಾಗರಿಕರ ಗುಂಪು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

ಗುಂಪಿನ ಪರವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಶೋಕ್ ಪೈ, ನ್ಯಾಯಮೂರ್ತಿ ಲೋಯಾ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು. ಮಹಾರಾಷ್ಟ್ರದಲ್ಲಿ ಸರಕಾರ ನಡೆಸುತ್ತಿರುವ ಮಹಾ ವಿಕಾಸ್ ಅಗಾಡಿಯ ಪ್ರಮುಖ ಪಕ್ಷವಾದ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ನಾವು ಭೇಟಿಯಾಗಿದ್ದೇವೆ. ಅವರ ಮುಂದೆ ನಮ್ಮ ಬೇಡಿಕೆ ಇರಿಸಿದ್ದೇವೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಶರದ್ ಪವಾರ್ ತಿಳಿಸಿದ್ದಾರೆ ಎಂದು ಪೈ ಹೇಳಿದರು. ನಾವು ಈ ಕುರಿತು ಮನವಿಯನ್ನು ಮಹಾರಾಷ್ಟ್ರದ ವಿಧಾನ ಸಭೆ ಸ್ಪೀಕರ್ ನಾನಾ ಪಾಟೋಲೆ ಅವರಿಗೆ ಹಸ್ತಾಂತರಿಸಿದ್ದೇವೆ. ಮನವಿಯ ಪ್ರತಿಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ (ಲೋಯಾ ಸಾವಿನ ಕುರಿತು ತನಿಖೆ ನಡೆಸಲು) ರವಾನಿಸಿದ್ದೇವೆ ಎಂದು ಪೈ ಹೇಳಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ಲೋಯಾ ಅವರು ತನ್ನ ಸಹೋದ್ಯೋಗಿಯ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳಲು ತೆರಳಿದ ಸಂದರ್ಭ ನಾಗಪುರದಲ್ಲಿ 2014 ಡಿಸೆಂಬರ್ 1ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News