ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ ಕನ್ನಡಿಗರಿಗೆ ಶೇ.25ರಷ್ಟು ಸೀಟುಗಳು: ವಿಧಾನಸಭೆಯಲ್ಲಿ ವಿಧೇಯಕ ಮಂಡನೆ

Update: 2020-02-18 17:14 GMT

ಬೆಂಗಳೂರು, ಫೆ.18: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಒದಗಿಸುವುದಕ್ಕಾಗಿ ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ ಅಧಿನಿಯಮ-1986ನ್ನು(1986ರ ಕರ್ನಾಟಕ ಅಧಿನಿಯಮ 22) ಆರಂಭಿಕವಾಗಿ ತಿದ್ದುಪಡಿ ಮಾಡಲು ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ(ತಿದ್ದುಪಡಿ)ವಿಧೇಯಕ-2020 ಅನ್ನು ಮಂಗಳವಾರ ವಿಧಾನಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದರು.

ಉದ್ದೇಶಗಳು ಮತ್ತು ಕಾರಣಗಳು: ಭೋಪಾಲದಲ್ಲಿರುವ ರಾಷ್ಟ್ರೀಯ ಕಾನೂನು ವಿದ್ಯಾಲಯ ಮಧ್ಯಪ್ರದೇಶ ರಾಜ್ಯದ ನಿವಾಸಿ ಅಭ್ಯರ್ಥಿಗಳಿಗೆ ಶೇ.25ರಷ್ಟು ಸೀಟುಗಳುನ್ನು ಸಮತಲವಾಗಿ ಮೀಸಲಿರಿಸಿದೆ. ಪಂಜಾಬ್‌ನಲ್ಲಿರುವ ರಾಜೀವ್‌ಗಾಂಧಿ ರಾಷ್ಟ್ರೀಯ ವಿಶ್ವವಿದ್ಯಾನಿಲಯವು ಪಂಜಾಬ್ ರಾಜ್ಯದ ನಿವಾಸಿಗಳಿಗೆ ಶೇ.10ರಷ್ಟು ಸೀಟುಗಳನ್ನು ಮೀಸಲಿರಿಸಿದೆ.

ಅಸ್ಸಾಂನಲ್ಲಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ ಮತ್ತು ನ್ಯಾಯಾಂಗ ಅಕಾಡೆಮಿ ಅಸ್ಸಾಂನ ಖಾಯಂ ನಿವಾಸಿಗಳಿಗೆ 30 ಸೀಟುಗಳನ್ನು ಮೀಸಲಿರಿಸಿದೆ. ಲಕ್ನೋನಲ್ಲಿರುವ ಡಾ.ರಾಮಮನೋಹರ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವು ಉತ್ತರಪ್ರದೇಶದ ನಿವಾಸಿ ಅಭ್ಯರ್ಥಿಗಳಿಗೆ 258 ಸೀಟುಗಳ ಪೈಕಿ 80 ಸೀಟುಗಳನ್ನು ಮೀಸಲಿರಿಸಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ದಾಮೋದರ್ ಸಂಜೀವಯ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಆಂಧ್ರಪ್ರದೇಶದ ಸಾಮಾನ್ಯ ಅಭ್ಯರ್ಥಿಗಳಿಗೆ 120 ಸೀಟುಗಳ ಪೈಕಿ 30 ಸೀಟುಗಳನ್ನು ಮೀಸಲಿರಿಸಿದೆ. ತಿರುಚಿರಾಪಳ್ಳಿಯಲ್ಲಿರುವ ತಮಿಳುನಾಡು ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ 54 ಸೀಟುಗಳ ಪೈಕಿ 16 ಸಾಮಾನ್ಯ ತಮಿಳುನಾಡು ಸೀಟುಗಳನ್ನು ತುಂಬಲಾಗುತ್ತಿದೆ.

ಹೈದರಾಬಾದ್‌ನಲ್ಲಿರುವ ಕಾನೂನು ಅಧ್ಯಯನಗಳ ರಾಷ್ಟ್ರೀಯ ಅಕಾಡೆಮಿ ಮತ್ತು ಸಂಶೋಧನಾ ವಿಶ್ವವಿದ್ಯಾನಿಲಯದಲ್ಲಿ ತೆಲಂಗಾಣದ ನಿವಾಸಿಗಳಿಗೆ 81 ಸೀಟುಗಳ ಪೈಕಿ 16 ಸೀಟುಗಳನ್ನು ಮೀಸಲಿರಿಸಿದೆ. ರಾಯಪುರದಲ್ಲಿರುವ ಹಿದಾಯತ್ ಉಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಛತ್ತೀಸ್‌ಘಡ ನಿವಾಸಿ ವಿದ್ಯಾರ್ಥಿಗಳಿಗೆ 187 ಸೀಟುಗಳ ಪೈಕಿ 80 ಸೀಟುಗಳನ್ನು ಸಮತಲವಾಗಿ ತುಂಬಲಾಗುತ್ತಿದೆ.

ಬೆಂಗಳೂರಿನಲ್ಲಿರುವ ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯವು ರಾಜ್ಯ ವಿಧಾನಮಂಡಲದ ಸೃಜನೆಯಾಗಿದ್ದು, ಕರ್ನಾಟಕದ ವಿದ್ಯಾರ್ಥಿಗಳಿಗೆ ಈ ವಿಶ್ವವಿದ್ಯಾಲಯದಲ್ಲಿ ಯಾವುದೇ ಮೀಸಲಾತಿಯನ್ನು ಒದಗಿಸಿಲ್ಲ. ಆದುದರಿಂದ, ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಒದಗಿಸಲು ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ(ತಿದ್ದುಪಡಿ) ವಿಧೇಯಕ-2020 ಅನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News