ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ: ಸಿಎಂ ಜೊತೆ ಚರ್ಚಿಸಿ ಕ್ರಮ- ಸಚಿವ ಮಾಧುಸ್ವಾಮಿ

Update: 2020-02-18 17:04 GMT

ಬೆಂಗಳೂರು, ಫೆ.18: ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ತೋಟಗಾರಿಕೆ ಸಚಿವರ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿತವಾಗಿದ್ದು, ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಅಲ್ಲದೆ, ಕೆಲವು ತೆಂಗು ಬೆಳೆಗಾರರು ಆರ್ಥಿಕ ನಷ್ಟದ ಕಾರಣದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಆದುದರಿಂದ, ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿಯನ್ನು ಖರೀದಿಸಲು ಮುಂದಾಗಬೇಕು. ಇದರಿಂದ, ರೈತರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಅವರು ಹೇಳಿದರು.

ಒಂದು ಕ್ವಿಂಟಾಲ್ ಕೊಬ್ಬರಿಗೆ ಈ ಹಿಂದೆ 18 ಸಾವಿರ ರೂ.ಗಳು ಸಿಗುತ್ತಿತ್ತು. ಆದರೆ, ಈಗ ಬೆಲೆ 8 ಸಾವಿರ ರೂ.ಗಳಿಗೆ ಇಳಿದಿದೆ ಎಂದು ಶಿವಲಿಂಗೇಗೌಡ ಹೇಳಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಬಿ.ಸಿ.ನಾಗೇಶ್, ತಿಪಟೂರು ಭಾಗದಲ್ಲಿ ಹೆಚ್ಚಿಗೆ ತೆಂಗು ಬೆಳೆಯುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿದಿರುವುದರಿಂದ ರೈತರು ಕಂಗಾಲಾಗಿದ್ದಾರೆ ಎಂದರು.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬೆಂಬಲ ಬೆಲೆ ನೀಡಿ ಕೊಬ್ಬರಿಯನ್ನು ಖರೀದಿ ಮಾಡಲಾಗಿತ್ತು. ಕೇಂದ್ರ ಸರಕಾರ ಕೊಬ್ಬರಿಗೆ ನಿಗದಿಪಡಿಸಿರುವ 9,920 ರೂ.ಬೆಂಬಲ ಬೆಲೆ ತುಂಬಾ ಕಡಿಮೆಯಾಗಿದೆ ಎಂದು ನಾಗೇಶ್ ಹೇಳಿದರು.

ಕೇರಳ ಮತ್ತು ಕರಾವಳಿ ಭಾಗದ ಕೊಬ್ಬರಿ ಬೆಳೆ ಆಧರಿಸಿ ಕೇಂದ್ರ ಸರಕಾರ ಬೆಲೆ ನಿಗದಿ ಮಾಡುತ್ತಿದೆ. ಆದರೆ, ತಿಪಟೂರು ಸುತ್ತಮುತ್ತಲಿನ ತೆಂಗು ಬೆಳೆಗಾರರ ಉತ್ಪಾದನಾ ವೆಚ್ಚ ಅಧಿಕವಾಗಿದೆ. ಆದುದರಿಂದ, ತಿಪಟೂರು ಮತ್ತು ಸುತ್ತಮುತ್ತಲು ಬೆಳೆಯುವ ಕೊಬ್ಬರಿಗೆ ಹೆಚ್ಚು ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂಬಂಧ ಸದನದಲ್ಲಿ ಉತ್ತರ ನೀಡಿದ ಸಚಿವ ಮಾಧುಸ್ವಾಮಿ, 2019-2020ರ ಲ್ಲಿ ಕೇಂದ್ರ ಸರಕಾರ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 9,920 ರೂ. ದರ ನಿಗದಿ ಮಾಡಿದೆ. ಮಾರುಕಟ್ಟೆಯಲ್ಲಿ ಕೊಬ್ಬರಿ ದರ 9,920ಕ್ಕಿಂತ ಕಡಿಮೆಯಾಗಿಲ್ಲ. ಆದುದರಿಂದ, ರಾಜ್ಯ ಸರಕಾರ ಮಾರುಕಟ್ಟೆಯಲ್ಲಿ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ಸಾಧ್ಯವಾಗುವುದಿಲ್ಲ ಎಂದರು.

ಒಂದು ವೇಳೆ ನಿಗದಿತ ದರಕ್ಕಿಂತ ಕಡಿಮೆಯಾದಲ್ಲಿ ಖಂಡಿತವಾಗಿಯೂ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಮಾಧುಸ್ವಾಮಿ ತಿಳಿಸಿದರು. ಈ ಸಂದರ್ಭದಲ್ಲಿ ಎದ್ದು ನಿಂತ ಶಿವಲಿಂಗೇಗೌಡ, ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ 8 ಸಾವಿರ ರೂ.ಗಳಿಗೆ ಇಳಿದಿದೆ. ಕೇಂದ್ರ ಸರಕಾರದ ವಿಚಾರ ಬೇಡ, ತೆಂಗು ಬೆಳೆಗಾರರನ್ನು ರಕ್ಷಣೆ ಮಾಡಲು ಈ ನಿಮ್ಮ ಸರಕಾರದ ಬದ್ಧತೆ ಏನು ಅದನ್ನು ಸದನಕ್ಕೆ ತಿಳಿಸಿ ಎಂದು ಆಗ್ರಹಿಸಿದರು.

ನಾನು ಒಬ್ಬ ತೆಂಗು ಬೆಳೆಗಾರ, ತಿಪಟೂರು ಭಾಗಕ್ಕೆ ನಾನು ಸೇರಿದವನು. ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ನೋವಿದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 9920 ರೂ.ಗಳಿಗಿಂತ ಬೆಲೆ ಕಡಿಮೆಯಾದರೆ ಸರಕಾರ ಮಧ್ಯಪ್ರವೇಶ ಮಾಡಬಹುದು. ಈ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸಿ ವಿವರವಾದ ಉತ್ತರ ಕೊಡಿಸುತ್ತೇನೆ ಎಂದು ಮಾಧುಸ್ವಾಮಿ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News