ಗರ್ಭಿಣಿಯರು ತೆರಳುತ್ತಿದ್ದ ಆಟೋ ಪಲ್ಟಿ: ಓರ್ವೆ ಮೃತ್ಯು, ಹಲವರಿಗೆ ಗಾಯ

Update: 2020-02-18 17:17 GMT

ಕಲಬುರಗಿ, ಫೆ.18: ಇಲ್ಲಿನ ಔರಾದ್ ಹತ್ತಿರ ಗರ್ಭಿಣಿ ಮಹಿಳೆಯರು ತೆರಳುತ್ತಿದ್ದ ಆಟೋವೊಂದು ಪಲ್ಟಿಯಾಗಿ ಓರ್ವಳು ಗರ್ಭಿಣಿ ಮೃತಪಟ್ಟು 8 ಗರ್ಭಿಣಿಯರು ಗಾಯಗೊಂಡಿರುವ ಘಟನೆ ನಡೆದಿದೆ.

ಪ್ರಿಯಾಂಕ (25) ಮೃತ ಗರ್ಭಿಣಿ ಎಂದು ಗುರುತಿಸಲಾಗಿದ್ದು, ಭೂಸಣಗಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಗಾಯಗೊಂಡ ಉಳಿದ 8 ಮಹಿಳೆಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಐಸಿಯು ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಅಪಘಾತ ಸಂಭವಿಸಿದ ವಾಹನದಲ್ಲಿ ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 12 ಜನರಿದ್ದರೆಂದು ತಿಳಿದು ಬಂದಿದ್ದು, ಭೂಸಣಗಿ ಹಾಗೂ ಸುತ್ತಲಿನ ಗ್ರಾಮಗಳ ಒಟ್ಟು 9 ಮಂದಿ ಗರ್ಭಿಣಿಯರನ್ನು ವಾಹನದಲ್ಲಿ ತಿಂಗಳ ಚೆಕಪ್​​ಗಾಗಿ ಔರಾದ್ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆತಂದು, ಬಳಿಕ ವಾಪಸ್ ಗ್ರಾಮಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ.

ಆಟೋ ಎದುರು ಆಕಳು ಬಂದಿದ್ದು, ಈ ವೇಳೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಅದೇ ಮಾರ್ಗವಾಗಿ ತೆರಳುತ್ತಿದ್ದ ಶಾಸಕ ಬಸವರಾಜ್ ಮತ್ತಿಮೂಡ್ ಅವರ ಪತ್ನಿ ಜಯಶ್ರೀ ಮತ್ತಿಮೂಡ್ ಅವರು ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News