ರಾಜ್ಯದ ಆರ್ಥಿಕ ಸ್ಥಿತಿಗತಿಯ ಕುರಿತು ಸರಕಾರ ಶ್ವೇತಪತ್ರ ಹೊರಡಿಸಲಿ: ಸಿ.ಎಂ.ಇಬ್ರಾಹಿಂ

Update: 2020-02-18 17:20 GMT

ಬೆಂಗಳೂರು, ಫೆ.18: ರಾಜ್ಯದ ಹಣಕಾಸಿನ ಸ್ಥಿತಿಗತಿಗಳ ಕುರಿತು ರಾಜ್ಯ ಸರಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕೆಂದು ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಅವರು ಆಗ್ರಹಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳ ಮಾತನಾಡಿದ ಅವರು, ರಾಜ್ಯ ಸರಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸುವ ಮೂಲಕ ರಾಜ್ಯಕ್ಕೆ ಅಗತ್ಯವಿರುವ ಹಣವನ್ನು ಕೇಂದ್ರ ಸರಕಾರದ ಬಳಿ ಮಂಜೂರು ಮಾಡಿಕೊಳ್ಳುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡೋಣವೆಂದು ಸಲಹೆ ನೀಡಿದರು.

ಸದ್ಯ ರಾಜ್ಯ ಸರಕಾರ ಖಜಾನೆಯಲ್ಲಿ ಎಷ್ಟು ಹಣವಿದೆ. ಕೇಂದ್ರ ಸರಕಾರದಿಂದ ಜಿಎಸ್‌ಟಿಯಲ್ಲಿ ಎಷ್ಟು ಹಣ ಬರಬೇಕಿದೆ. ಉದ್ಯೋಗ ಖಾತ್ರೆ ಯೋಜನೆಯಡಿ ಎಷ್ಟು ಹಣ ಬರಬೇಕಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಿ, ರಾಜ್ಯದ ಜನತೆಯ ಮುಂದಿಡಲಿ. ಆ ನಂತರ ಹೆಚ್ಚಿನ ಅನುದಾನಕ್ಕಾಗಿ ಸರ್ವಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುವುದು ಸೂಕ್ತವಾಗಿದೆ ಎಂದು ಅವರು ಹೇಳಿದರು.

ಅನುದಾನದಲ್ಲಿ ನಿರ್ಲಕ್ಷ್ಯ: ಕರ್ನಾಟಕವು ಕೇಂದ್ರ ಸರಕಾರಕ್ಕೆ ಹೆಚ್ಚಿಗೆ ತೆರಿಗೆ ಕಟ್ಟುವಲ್ಲಿ ಮೂರನೇ ಸ್ಥಾನದಲ್ಲಿದೆ. ಹಾಗೂ ಬಿಹಾರ, ಅಸ್ಸಾಮ್, ಉತ್ತರ ಪ್ರದೇಶ ಸೇರದಂತೆ ಉತ್ತರ ಭಾರತದ ವಲಸಿಗರನ್ನು ನಾವು ಉದಾರವಾಗಿ ಬರಮಾಡಿಕೊಂಡು ಬದುಕನ್ನು ಕಟ್ಟಕೊಟ್ಟಿದ್ದೇವೆ. ಆದರೆ, ಕೇಂದ್ರದ ಅನುದಾನ ಬಿಡುಗಡೆಯಲ್ಲಿ ಮಾತ್ರ ನಾವು ನಿರ್ಲಕ್ಷಕ್ಕೆ ಒಳಗಾಗಿದ್ದೇವೆ ಎಂದು ಅವರು ಆರೋಪಿಸಿದರು.

ನೆರೆ ಸಂತ್ರಸ್ತರ ಬದುಕು ಹಸನಾಗಿಲ್ಲ: ನೆರೆ ಹಾವಳಿಯಿಂದ ಉತ್ತರ ಕರ್ನಾಟಕದ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಬಹುತೇಕ ಕುಟುಂಬಗಳು ಈಗಲೂ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದೆ ನರಳಾಡುತ್ತಿದ್ದಾರೆ. ಆದರೆ, ರಾಜ್ಯ ಸರಕಾರ ಮಾತ್ರ ನೆರೆ ಸಂತ್ರಸ್ತರಿಗೆ ಎಲ್ಲ ರೀತಿಯ ಪರಿಹಾರ ನೀಡಿದ್ದೇವೆಂದು ಹೇಳುತ್ತಿದೆ. ಹಾಗಾದರೆ, ಸರ್ವಪಕ್ಷಗಳ ಸದನ ಸಮಿತಿ ಮಾಡಿಕೊಂಡು ಸಮೀಕ್ಷೆ ನಡೆಸಲು ರಾಜ್ಯ ಸರಕಾರ ಸಿದ್ಧವಿದೆಯೇ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News