ಶಾಶ್ವತ ಪರಿಹಾರ ಸಿಗುವವರೆಗೂ ನಿರಂತರ ಹೋರಾಟ: ಸಿರಿಮನೆ ನಾಗರಾಜ್

Update: 2020-02-18 18:09 GMT

ಸಿದ್ದಾಪುರ, ಫೆ.18: ಕಳೆದ ಹಲವು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೂರಿಗಾಗಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸುವವರೆಗೂ ನಿರಂತರ ನಡೆಯಲಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೇಂದ್ರ ಸಮಿತಿ ಸದಸ್ಯ ಸಿರಿಮನೆ ನಾಗರಾಜ್ ತಿಳಿಸಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯತ್ ಎದುರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ‌ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಿದ್ದಾಪುರ, ಬಾಳುಗೋಡು, 6ನೆ ಹೊಸಕೋಟೆ, ಪಾಲೇಮಾಡು, ಕೆದಮುಳ್ಳೂರು, ಹೈಸೊಡ್ಲೂರು, ಚೆರಿಯಪರಂಬು ಸೇರಿದಂತೆ ವಿವಿಧ ಭಾಗದ ನಿವೇಶನ ರಹಿತರ ಸಮಸ್ಯೆಗಳ‌ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಕೂಲಂಕಷವಾಗಿ ಚರ್ಚಿಸಲಾಗಿದ್ದು, ಸಿದ್ದಾಪುರ ವ್ಯಾಪ್ತಿಯಲ್ಲಿರುವ ಒತ್ತುವರಿ ಸರಕಾರಿ ಭೂಮಿಗಳ ಪ್ರಕರಣಗಳು ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ.

ಈ ಭಾಗದ ಸಂತ್ರಸ್ತರಿಗೆ ಅನುಕೂಲ ಆಗುವ ರೀತಿಯಲ್ಲಿ ವಿರಾಜಪೇಟೆ ತಾಲೂಕಿನಲ್ಲೆ ನಿವೇಶನ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದು ಒಂದು ವಾರದಲ್ಲೇ ಸಿದ್ದಾಪುರ ಭಾಗದ ಸಂತ್ರಸ್ತರ‌ ಸಮಸ್ಯೆ ಬಗೆಹರಿಸುವುದೆಂದು ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಬಾಳುಗೋಡು ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ವಿರಾಜಪೇಟೆ ತಾಲೂಕಿನಲ್ಲಿ ಒಂದು ಕೇಂದ್ರವನ್ನು ತೆರೆದು ವಸತಿ ರಹಿತರ ಅರ್ಜಿಗಳನ್ನು ಸ್ವೀಕರಿಸಿ ಒಂದು ತಿಂಗಳಿನಲ್ಲಿ ಬಾಳುಗೋಡು ಜಾಗದ ಸರ್ವೇ ನಡೆಸಿ ನಿವೇಶನಗಳನ್ನು ಹಂಚುವ ಬಗ್ಗೆ ಜಿಲ್ಲಾಧಿಕಾರಿಗಳು ತಿಳಿಸಿರುವುದಾಗಿ ಮಾಹಿತಿ ನೀಡಿದರು. ಅಲ್ಲದೆ ಸಿದ್ದಾಪುರ ಗ್ರಾಮ ಪಂಚಾಯತ್ ನೀಡಿರುವ ಸಂತ್ರಸ್ತರ‌ ಪಟ್ಟಿಯ ಆಧಾರದಲ್ಲಿ 5 ಸಾವಿರ ರೂ. ಯಂತೆ ಬಾಡಿಗೆ ಹಣವನ್ನು ಸಂತ್ರಸ್ತರ‌ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಹೆಸರು ಬಿಟ್ಟು ಹೋಗಿದ್ದಲ್ಲಿ ಗ್ರಾಮ ಪಂಚಾಯತ್ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಿದರೆ ಪರಿಶೀಲಿಸಿ ನೀಡುವುದಾಗಿ ತಿಳಿಸಿದ್ದಾರೆ ಎಂದ ಅವರು, ಸೂರಿಗಾಗಿ ನಡೆಯುತ್ತಿರುವ ನ್ಯಾಯಯುತ ಹೋರಾಟಕ್ಕೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದ್ದು, ನಿವೇಶನ ರಹಿತರಿಗೆ ಶಾಶ್ವತ ನಿವೇಶನ ದೊರಕದಿದ್ದರೆ ನಿರಂತರ ಹೋರಾಟ ನಡೆಯಲಿದೆ ಎಂದರು. 

ಸಮಿತಿಯ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಜಿಲ್ಲೆಯ ಒಂದು ಲಕ್ಷಕ್ಕೂ ಹೆಚ್ಚು ಸಿ.ಎನ್.ಡಿ ಭೂಮಿಯನ್ನು ಕಂದಾಯ ಇಲಾಖೆ ನಡುತೋಪು ಮಾಡಲು ಅರಣ್ಯ ಇಲಾಖೆಗೆ ನೀಡಿದೆ. ಸರಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಆ ಭೂಮಿಯನ್ನು ಮರಳಿ ಪಡೆದು ವಸತಿ ರಹಿತರಿಗೆ ಹಂಚಬೇಕಾಗಿದೆ. ಸರಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದ ಅವರು, ಇಲ್ಲಿನ ಶಾಸಕರು ಕೂಡಾ ಸಂತ್ರಸ್ತರನ್ನು ನಿರ್ಲಕ್ಷಿಸಿದ್ದಾರೆ. ಶಾಸಕರು ಕೇವಲ ಭರವಸೆ ಕೊಟ್ಟರೆ ಸಾಲದು ಮಾರ್ಚ್ 3ರ ಅಧಿವೇಶನದಲ್ಲಿ ಸಮಸ್ಯೆಯನ್ನು ಪರಿಹರಿಸಬೇಕು. ಇಚ್ಛಾಶಕ್ತಿ ಇದ್ದರೆ ಸಮಸ್ಯೆ ಬಗೆಹರಿಸಲಿಕೆ ಸುಲಭ ಮಾರ್ಗಗಳಿವೆ. ಸಂತ್ರಸ್ತರಿಗೆ ನಿವೇಶನ ಕಲ್ಪಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಭೂಮಿ ವಸತಿ ಹೋರಾಟಗಾರ ನಿರ್ವಾಣಪ್ಪ ಮಾತನಾಡಿ, ಜಿಲ್ಲೆಯ ಶಾಸಕರು ಮತ್ತು ಸಂಸದರು ಜಿಲ್ಲಾಧಿಕಾರಿಯನ್ನು ಕೆಲಸ ಮಾಡಲು ಬಿಡದೆ ಕಟ್ಟಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನಿವೇಶನಕ್ಕಾಗಿ ಸಿದ್ದಾಪುರ, ಬಾಳುಗೋಡು ಸೇರಿದಂತೆ ಜಿಲ್ಲೆಯಾದ್ಯಂತ ನಿರಂತರ ಹೋರಾಟಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಭೂಮಿ ಹಂಚುವ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ ಅವರು, ರಾಜಕಾರಣಿಗಳು ಅಧಿಕಾರಿಗಳನ್ನು ಪ್ರಾಮಾಣಿಕವಾಗಿ ಕೆಲಸ ಮಾಡಲು ಬಿಡದೆ ವಿಷಯಾಂತರ ಮಾಡಿ ಹೋರಾಟದ ದಿಕ್ಕನ್ನು ತಪ್ಪಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಮುಖರಾದ ಕುಮಾರ್ ಸಮತಳ, ಕಂದೆಗಾಲ ಶ್ರೀನಿವಾಸ್, ಮರಿಯಪ್ಪ, ಮಂಜುನಾಥ್, ಮೊಣ್ಣಪ್ಪ, ತಾಯಮ್ಮ, ಕುಸುಮಾವತಿ, ಹರೀಶ, ಶೌಕತ್ ಅಲಿ, ಸಣ್ಣಪ್ಪ ಸೇರಿದಂತೆ ಮತ್ತಿತರರು ಇದ್ದರು. ಬಳಿಕ ವಿರಾಜಪೇಟೆ ಸಮೀಪದ ಬಾಳುಗೋಡು ನಿರಾಶ್ರಿತರ ಹೋರಾಟ ಸ್ಥಳಕ್ಕೆ ಸಮಿತಿಯ ಸದಸ್ಯರು ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News