ದಾವಣಗೆರೆ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಗೆ ಹೈಕೋರ್ಟ್ ಅಸ್ತು

Update: 2020-02-18 18:17 GMT

ಬೆಂಗಳೂರು, ಫೆ.18: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ನಾಳೆ(ಫೆ.19) ನಡೆಯಲಿರುವ ಚುನಾವಣೆಗೆ ಹೈಕೋರ್ಟ್ ಅಸ್ತು ಎಂದಿದೆ. ಆದರೆ, ಚುನಾವಣೆ ಪ್ರಕ್ರಿಯೆ ಮತ್ತು ಫಲಿತಾಂಶವು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ. 

ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ 12 ಮಂದಿ ವಿಧಾನಪರಿಷತ್ ಸದಸ್ಯರ ಹೆಸರುಗಳನ್ನು ಸೇರ್ಪಡೆಗೊಳಿಸಿರುವುದನ್ನು ಪ್ರಶ್ನಿಸಿ ದಾವಣಗೆರೆ ಎಂ. ಸುಧಾ ಹಾಗೂ ಇತರರು ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಸ್.ಸುನೀಲ್‌ ದತ್ ಯಾದವ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್, ಕೆ.ಸಿ. ಕೊಂಡಯ್ಯ, ಎಚ್.ಎಂ. ರೇವಣ್ಣ, ರಘು ಆಚಾರ್, ಬಿಜೆಪಿಯ ಲೆಹರ್ ಸಿಂಗ್, ಕೆ.ಪಿ. ನಂಜುಂಡಿ ವಿಶ್ವಕರ್ಮ, ವೈ.ಎ ನಾರಾಯಣಸ್ವಾಮಿ, ಎನ್. ರವಿಕುಮಾರ್, ಡಾ.ತೇಜಸ್ವಿನಿ ಗೌಡ, ಎಸ್. ರುದ್ರೇಗೌಡ, ಹನುಮಂತ ನಿರಾಣಿ, ಪಕ್ಷೇತರ ಸದಸ್ಯ ಡಿ.ಯು ಮಲ್ಲಿಕಾರ್ಜುನ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಇವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಸಲಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News