ಖಾದರ್ ತಲೆ ಕಡಿಯುತ್ತೇವೆ ಎಂದವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ: ಮಾಜಿ ಸಚಿವೆ ಜಯಮಾಲಾ ಪ್ರಶ್ನೆ

Update: 2020-02-19 12:32 GMT

ಬೆಂಗಳೂರು, ಫೆ.19: ಶಾಸಕ ಯು.ಟಿ.ಖಾದರ್ ತಲೆಯನ್ನು ಕಡಿಯುತ್ತೇವೆಂದ ಆರೋಪಿಗಳ ಮೇಲೆ ಪೊಲೀಸರು ಇಲ್ಲಿವರೆಗೆ ಯಾವ ಕ್ರಮ ಕೈಗೊಂಡಿದ್ದಾರೆಂದು ಮಾಜಿ ಸಚಿವೆ ಜಯಮಾಲಾ ಪ್ರಶ್ನಿಸಿದ್ದಾರೆ.

ಬುಧವಾರ ವಿಧಾನಪರಿಷತ್‌ನಲ್ಲಿ ನಿಯಮ 68ರಡಿಯಲ್ಲಿ ಮಾತನಾಡಿದ ಅವರು, ಯು.ಟಿ.ಖಾದರ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುವ ಪೊಲೀಸರು, ಅವರ ತಲೆಯನ್ನು ಕಡಿಯುತ್ತೇವೆನ್ನುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಯು.ಟಿ.ಖಾದರ್‌ಗೆ ಸಿಎಎ ವಿರುದ್ಧ ಮಾತನಾಡುತ್ತಾ, ಕೇಂದ್ರ ಸರಕಾರ ಸಿಎಎ, ಎನ್‌ಆರ್‌ಸಿ ಮೂಲಕ ಜನರನ್ನು ಅತಂತ್ರರನ್ನಾಗಿ ಮಾಡುತ್ತಿದೆ. ಸರಕಾರ ಹೀಗೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದಿದ್ದಕ್ಕೆ, ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಆದರೆ, ಬಿಜೆಪಿ ಸಂಸದರೊಬ್ಬರು ಬಹಿರಂಗವಾಗಿಯೇ ಬೆಂಕಿಯೇ ಹಚ್ಚುತ್ತೇವೆಂದರು. ಅವರ ವಿರುದ್ಧ ಯಾವುದೇ ಕ್ರಮವಿಲ್ಲವೆಂದು ಕಿಡಿಕಾರಿದರು.

ಯು.ಟಿ.ಖಾದರ್ ಏನಾದರು ವಿದೇಶದಿಂದ ಪಿತೂರಿ ನಡೆಸಿದ್ದಾರೆಯೇ, ಭಯೋತ್ಪಾದನೆ ಕೃತ್ಯ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಸಿಎಎ ವಿರುದ್ಧ ಮಾತನಾಡಿದಕ್ಕೆ ದೇಶದ್ರೋಹ ಪ್ರಕರಣ ದಾಖಲಿಸುವುದು ಸರಿಯೇ. ಈ ಕೂಡಲೇ ದೇಶದ್ರೋಹದ ಪ್ರಕರಣವನ್ನು ಕೈಬಿಟ್ಟು, ಯು.ಟಿ.ಖಾದರ್ ತಲೆ ಕಡಿಯುತ್ತೇವೆಂದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಆಯೋಗ ಏನ್ಮಾಡ್ತಿದೆ?

ರಾಜ್ಯದಲ್ಲಿ ಮಕ್ಕಳ ಹಕ್ಕು, ಮಹಿಳಾ ಹಕ್ಕು, ಮಾನವ ಹಕ್ಕುಗಳು ದಮನಕ್ಕೆ ಒಳಗಾಗುತ್ತಿವೆ. ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಾಟಕ ಮಾಡಿದ ವಿದ್ಯಾರ್ಥಿಗಳನ್ನು ಸಮವಸ್ತ್ರಧಾರಿ ಪೊಲೀಸರು ಗಂಟೆಗಟ್ಟಲೆ ತನಿಖೆ ನಡೆಸುತ್ತಾರೆ. ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ಈ ಬಗ್ಗೆ ಮಕ್ಕಳ ಆಯೋಗ, ಮಾನವ ಹಕ್ಕುಗಳ ಆಯೋಗ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ತರಿಸಿದೆ.

-ಜಯಮಾಲಾ, ಮಾಜಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News