ಸಿಎಎ ವಿರೋಧಿ ಕವನ ವಾಚನ ಪ್ರಕರಣ: ಕವಿ ಸಿರಾಜ್ ಬಿಸರಳ್ಳಿಗೆ ಜಾಮೀನು

Update: 2020-02-19 13:26 GMT

ಗಂಗಾವತಿ, ಫೆ.19: ಕವನ ವಾಚನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ವಶದಲ್ಲಿದ್ದ ಪತ್ರಕರ್ತ, ಕವಿ ಸಿರಾಜ್ ಬಿಸರಳ್ಳಿ ಅವರಿಗೆ ಗಂಗಾವತಿ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜನವರಿ 9ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಆನೆಗೊಂದಿ ಉತ್ಸವದಲ್ಲಿ ಸಿಎಎ ವಿರೋಧಿ ಕವನವೊಂದನ್ನು ಸಿರಾಜ್ ಬಿಸರಳ್ಳಿ ಕವನ ವಾಚಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಾಜ್ ಬಿಸರಳ್ಳಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಕವನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದ ಆರೋಪದ ಮೇಲೆ ಕನ್ನಡ ನೆಟ್.ಕಾಂ ಸಂಪಾದಕ ರಾಜಬಕ್ಷಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಾಜ್ ಬಿಸರಳ್ಳಿ ಮತ್ತು ರಾಜಬಕ್ಷಿ ಅವರು ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿ ಮಧ್ಯಂತರ ಜಾಮೀನಿಗೆ ಆರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅರ್ಜಿ ತಿರಸ್ಕರಿಸಿದ್ದು, ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇಂದು ಪೊಲೀಸ್ ಕಸ್ಟಡಿ ಸಮಯ ಮುಕ್ತಾಯಗೊಂಡಿದೆ. ಈ ಹಿನ್ನೆಲೆ ಮತ್ತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ವಿಚಾರಣೆ ಬಳಿಕ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News