ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಲು ಒತ್ತಾಯ: ಸದನದಲ್ಲಿ ಪ್ರತಿಭಟನೆ

Update: 2020-02-19 14:24 GMT

ಬೆಂಗಳೂರು, ಫೆ.19: ಮಂಗಳೂರಿನ ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪರಿಹಾರವನ್ನು ರಾಜ್ಯ ಸರಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದರು.

ಬುಧವಾರ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಐವನ್‌ ಡಿಸೋಜಾ ಸದನದ ಬಾವಿಗಿಳಿದು, ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರು ಅಮಾಯಕರು. ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಹಾರ ಘೋಷಿಸಿ, ಪುನಃ ವಾಪಸ್ ಪಡೆದಿರುವುದು ಸರಿಯಲ್ಲವೆಂದು ಪ್ರತಿಭಟಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಗೋಲಿಬಾರ್ ಪ್ರಕರಣದಲ್ಲಿ ಸತ್ತವರು ಅಮಾಯಕರೆಂದು ಬಿಜೆಪಿ ಸದಸ್ಯ ರವಿಕುಮಾರ್ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಅವರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಇದಕ್ಕೆ ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಜೊತೆಯಾದರು. ಈ ವೇಳೆ ಪ್ರತಿಕ್ರಿಯಿಸಿದ ಸಭಾ ನಾಯಕ ಶ್ರೀನಿವಾಸ ಪೂಜಾರಿ, ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿವರಿಂದ ಉತ್ತರ ಕೊಡಿಸುತ್ತೇನೆಂದು ಭರವಸೆ ನೀಡಿದರು. ಬಳಿಕ, ಐವನ್ ಡಿಸೋಜ ಸದನದ ಬಾವಿಯಿಂದ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News