'ಗೋಲಿಬಾರ್ ಬಗ್ಗೆ ಪದೇ ಪದೇ ಮಾತನಾಡಿದರೆ....': ಸಿದ್ದರಾಮಯ್ಯಗೆ ಸಚಿವ ಮಾಧುಸ್ವಾಮಿ ನೀಡಿದ ಎಚ್ಚರಿಕೆ ಏನು ?

Update: 2020-02-19 14:37 GMT

ಬೆಂಗಳೂರು, ಫೆ. 19: ‘ಗೋಲಿಬಾರ್ ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪದೇ ಪದೇ ಉಲ್ಲೇಖ ಸರಿಯಲ್ಲ. ಅವರು ಈ ವರ್ತನೆ ಸದನದ ನಿಂದನೆ ಎಂದು ಪರಿಗಣಿಸಿ ನೋಟಿಸ್ ನೀಡಬೇಕಾಗುತ್ತದೆ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿರುವುದರಿಂದ ಅಮಾಯಕರು ಬಲಿಯಾಗುತ್ತಿರುವ’ ವಿಷಯದ ಬಗ್ಗೆ ಸಿದ್ದರಾಮಯ್ಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಮಾಧುಸ್ವಾಮಿ, ನೀವು ಹೀಗೆ ವರ್ತಿಸಿದರೆ ನೋಟಿಸ್ ನೀಡಬೇಕಾಗುತ್ತದೆ ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸಿನ ಪ್ರಿಯಾಂಕ್ ಖರ್ಗೆ, ‘ನೀವು ಯಾರಿಗೆ ಬೆದರಿಕೆ ಹಾಕುತ್ತಿದ್ದೀರಿ, ನೋಟಿಸ್ ಕೊಡಿ, ಆಮೇಲೆ ಏನಾಗುತ್ತದೆ ನಾವು ನೋಡ್ತೀವಿ’ ಎಂದು ತಿರುಗೇಟು ನೀಡಿದರು. ದಿನೇಶ್ ಗುಂಡೂರಾವ್, ಝಮೀರ್ ಅಹ್ಮದ್ ಖಾನ್ ಸೇರಿ ಇನ್ನಿತರರು ಇದಕ್ಕೆ ಧ್ವನಿಗೂಡಿಸಿದರು. ಹೀಗಾಗಿ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಫೋಟೋಗಳ ಪ್ರದರ್ಶನ: ಈ ವೇಳೆ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ, ಮಂಗಳೂರು ಗಲಭೆಗೆ ಸಂಬಂಧಿಸಿದ ಕೆಲ ಫೋಟೋಗಳನ್ನು ಸದನದಲ್ಲಿ ಪ್ರದರ್ಶನ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಫೋಟೋಗಳನ್ನು ಇವರು ಕೋರ್ಟ್‌ಗೆ ನೀಡಬೇಕಿತ್ತು ಎಂದು ತಿವಿದರು.

ಈ ಸಂದರ್ಭದಲ್ಲಿ ಎದ್ದುನಿಂತ ಬಿಜೆಪಿ ಸುನೀಲ್‌ ಕುಮಾರ್, ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆಯೇ ಗಲಭೆಗೆ ಮೂಲ ಕಾರಣ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೆಟ್ರೋಲ್ ಬಾಂಬ್, ಸೋಡಾ ಬಾಟಲಿಗಳನ್ನು ಎಸೆದಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕರು ಏಕೆ ಮಾತನಾಡುವುದಿಲ್ಲ ಎಂದು ಟೀಕಿಸಿದರು.

ಬಳಿಕ ಮಾತನಾಡಿದ ಮಾಧುಸ್ವಾಮಿ. ‘ನೀವು ಏನು ಬೇಕಾದರೂ ಮಾತನಾಡಲು ಅವಕಾಶವಿಲ್ಲ. ಅದೇ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುವುದು ಸರಿಯಲ್ಲ. ಸದನದ ನಿಂದನೆ ಎಂದು ನಾವು ಹೇಳಬೇಕಾಗುತ್ತದೆ ಎಂದು ಪುನರುಚ್ಚರಿಸಿದರು. ನೀವು ಎಷ್ಟು ಬಾರಿ ಆಕ್ಷೇಪ ಎತ್ತುವುದು. ನಾವು ಮಾತನಾಡಲಿಕ್ಕೆ ಅವಕಾಶ ನೀಡಿ ಎಂದು ಮಾತು ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News