ಸದನದಲ್ಲಿ ಗದ್ದಲ, ಕೋಲಾಹಲಕ್ಕೆ ಕಾರಣವಾದ 'ಬೆಂಕಿ'

Update: 2020-02-19 15:48 GMT

ಬೆಂಗಳೂರು, ಫೆ. 19: ‘ಬೆಂಕಿ ಹಚ್ಚುತ್ತೇನೆ, ಬೆಂಕಿ ಬೀಳಬಹುದು, ಬೆಂಕಿ ಬೀಳಲಿದೆ’ ಎಂದು ಪದ ಬಳಕೆಯಲ್ಲಿ ವ್ಯತ್ಯಾಸವಿದೆ. ಆದರೆ, ಯಾವುದೇ ವ್ಯಕ್ತಿ ‘ಯಾವ ಉದ್ದೇಶ’ದಿಂದ ಅಂತಹ ಹೇಳಿಕೆ ನೀಡಿದ್ದಾನೆಂಬುದು ಬಹಳ ಮುಖ್ಯ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಯು.ಟಿ.ಖಾದರ್ ಅವರು ಯಾವುದೇ ಸಂದರ್ಭದಲ್ಲಿಯೂ ‘ಬೆಂಕಿ ಹಚ್ಚುತ್ತೇನೆ’ ಎಂದು ಹೇಳಿಕೆ ನೀಡಿರಲು ಸಾಧ್ಯವಿಲ್ಲ. ಬೆಂಕಿ ಬೀಳಲಿದೆ ಎಂದು ಹೇಳಿದರೆ ಅದು ಹೇಗೆ ಘಟನೆಗೆ ಪ್ರಚೋದನೆ ನೀಡಿದಂತೆ ಆಗುತ್ತದೆ. ಅದು ದೇಶದ್ರೋಹ ಪ್ರಕರಣದಡಿ ಬರಲು ಸಾಧ್ಯವಿಲ್ಲ ಎಂದರು.

‘ಮಂಗಳೂರಿಗೆ ಬೆಂಕಿ ಹಚ್ಚುತ್ತೇವೆಂದು ಖಾದರ್ ಹೇಳಿಕೆ ನೀಡಿದ್ದೆ ಪ್ರಚೋದನೆಗೆ ಕಾರಣ’ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು. ಇದರಿಂದ ಸದನದಲ್ಲಿ ಆರೋಪ-ಪ್ರತ್ಯಾರೋಪ, ಗದ್ದಲ, ಕೋಲಾಹಲ ಸೃಷ್ಟಿಯಾಯಿತು.

‘ಖಾದರ್ ಬೆಂಕಿ ಹಚ್ಚುತ್ತೇನೆಂದು ಹೇಳಲಿಲ್ಲ, ಹಾಗೆ ಹೇಳಿದ್ದರೆ ದಾಖಲೆ ನೀಡಬೇಕು. ಖಾದರ್ ಬೆಂಕಿ ಬೀಳಬಹುದು ಎಂದು ಹೇಳಿದ್ದರು ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರಿಗೆ ಅಂತಹ ಯಾವುದೇ ಉದ್ದೇಶ ಇರಲು ಸಾಧ್ಯವಿಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News