ಶಾಹೀನ್ ಶಾಲೆಯ ವಿದ್ಯಾರ್ಥಿಗಳನ್ನು ತನಿಖೆಗೆ ಒಳಪಡಿಸಿಲ್ಲ: ಹೈಕೋರ್ಟ್‌ಗೆ ತಿಳಿಸಿದ ರಾಜ್ಯ ಸರಕಾರ

Update: 2020-02-19 15:55 GMT

ಬೆಂಗಳೂರು, ಫೆ.19: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಟಕ ಪ್ರದರ್ಶಿಸಿದ ಆರೋಪದಲ್ಲಿ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ತನಿಖೆಗೆ ಒಳಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ, 'ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ ನಡೆಸಿದ್ದು, ಯಾವುದೆ ತನಿಖೆಗೆ ಒಳಪಡಿಸಿಲ್ಲ' ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಬುಧವಾರ ವರದಿ ಸಲ್ಲಿಸಿದೆ.

ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿ, ಅರ್ಜಿದಾರರು ಮಾಧ್ಯಮಗಳಲ್ಲಿ ಬಂದ ವರದಿ ಆಧಾರದ ಮೇಲೆ ಪೊಲೀಸರು ಮಕ್ಕಳನ್ನು ತನಿಖೆಗೆ ಒಳಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಪೊಲೀಸರು ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ ನಡೆಸಲು ಶಾಲೆಗೆ ಭೇಟಿ ನೀಡುವಾಗ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ, ಉಪಾಧ್ಯಾಯರು, ಬಾಲಾಪರಾಧಿ ನ್ಯಾಯದ ಅಧಿಕಾರಿಗಳನ್ನು ಕರೆದುಕೊಂಡೆ ಹೋಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸದೆ ಜ.30ರಂದು 3 ವಿದ್ಯಾರ್ಥಿಗಳನ್ನು, ಜ.31ರಂದು 4 ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ ನಡೆಸಲಾಗಿದೆ ಎಂದು ಎಜಿ ಅವರು ಪೀಠಕ್ಕೆ ತಿಳಿಸಿದರು. ಎಜಿ ಅವರ ವರದಿ ಮಾನ್ಯ ಮಾಡಿದ ನ್ಯಾಯಪೀಠವು ಈ ಪ್ರಕರಣದಲ್ಲಿ ಇನ್ನಷ್ಟು ಕೌನ್ಸೆಲಿಂಗ್ ನಡೆಸುತ್ತೀರಾ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಎಜಿ ಅವರು, ಇನ್ನು ವಿದ್ಯಾರ್ಥಿಗಳ ಕೌನ್ಸೆಲಿಂಗ್ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಅರ್ಜಿದಾರರ ಪರ ವಾದಿಸಿದ ವಕೀಲರು, ಎಜಿ ಅವರ ವರದಿಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ನ್ಯಾಯಪೀಠವು ಸಮಯಾವಕಾಶ ನೀಡಿ, ವಿಚಾರಣೆಯನ್ನು ಮಾ.9ಕ್ಕೆ ಮುಂದೂಡಿತು.

ಪ್ರಕರಣವೇನು: ಶಾಹೀನ್ ಶಿಕ್ಷಣ ಸಂಸ್ಥೆಗೆ ಸಮವಸ್ತ್ರದಲ್ಲಿ ತೆರಳಿರುವ ಪೊಲೀಸರು ಅಪ್ರಾಪ್ತ ಮಕ್ಕಳನ್ನು ತನಿಖೆಗೆ ಒಳಪಡಿಸಿದ್ದಾರೆ. ಇದರಿಂದ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿದೆ. ಇದು ಕಾನೂನು ಬಾಹಿರವಾಗಿದೆ ಎಂದು ಈ ಹಿಂದೆ ಅರ್ಜಿದಾರರು ಪೀಠಕ್ಕೆ ತಿಳಿಸಿದ್ದರು. ನ್ಯಾಯಪೀಠವು ಪೊಲೀಸರು ಸಮವಸ್ತ್ರದಲ್ಲಿ ತೆರಳಿ ಅದು ಹೇಗೆ ಅಪ್ರಾಪ್ತ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದರು. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಲು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News