'ಮಂಗಳೂರಿನಲ್ಲಿ 2 ಜೀವ ಹೋಗಿದೆ, ಅದರಲ್ಲಿ ತಪ್ಪೇನಿದೆ': ಬಿಜೆಪಿ ಸದಸ್ಯನ ಮಾತಿಗೆ ಸದನ ಕೆಂಡ

Update: 2020-02-19 16:13 GMT

ಬೆಂಗಳೂರು, ಫೆ.19: ಮಂಗಳೂರಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ನೂರಾರು ಜನರ ಜೀವ ಉಳಿಸಲು ಒಂದಿಬ್ಬರ ಸಾವಾಗಿದೆ. ಅದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ಸದಸ್ಯ ಪ್ರಾಣೇಶ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಬುಧವಾರ ಭೋಜನ ನಂತರದ ವಿಧಾನ ಪರಿಷತ್ತಿನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ದೇಶದ್ರೋಹ ವಿಚಾರದ ಚರ್ಚೆ ಸಂದರ್ಭ ವಿಷಯ ಪ್ರಸ್ತಾಪಿಸುತ್ತಾ, ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಕಾರು ಢಿಕ್ಕಿ ಪ್ರಕರಣ ಸಂಬಂಧ ಪೊಲೀಸರು ಆತನ ಮೊಬೈಲ್ ನೆಟ್‌ವರ್ಕ್ ಪತ್ತೆ ಹಚ್ಚಿ, ಈತ ಕೃತ್ಯ ನಡೆದ ಸ್ಥಳದಲ್ಲಿದ್ದ ಎಂದು ಹೇಳಿದ್ದಾರೆ. ಆದರೆ, ಪ್ರಭಾವಿ ಸಚಿವ ಆರ್.ಅಶೋಕ್ ಪುತ್ರ ಅಪಘಾತ ನಡೆಸಿದ ಅಪಘಾತದಲ್ಲಿ ಇಬ್ಬರು ಸತ್ತಿದ್ದಾರೆ. ಅದರ ತನಿಖೆ ಆಗಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು. ಆಗ ಆಡಳಿತ ಪಕ್ಷದ ಸದಸ್ಯರು ಆಕ್ರೋಶಭರಿತರಾಗಿ, ನೀವು ಸ್ಥಳದಲ್ಲಿದ್ರಾ, ತನಿಖೆ ನಡೆಯುತ್ತಿದೆ, ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಪ್ರತಿಪಾದಿಸಿದರು.

ನಾರಾಯಣಸ್ವಾಮಿ ಮಾತು ಮುಂದುವರಿಸಿ, ಸದನ ಸಮಿತಿ ನಿರ್ಮಾಣ ಮಾಡಬೇಕು ಇಲ್ಲವೇ ನ್ಯಾಯಾಂಗ ತನಿಖೆ ವಹಿಸಿ ರಾಜ್ಯದ ಕಾನೂನು ಸುವ್ಯವಸ್ಥೆ ದುರ್ಬಲಗೊಂಡಿರುವುದರ ತನಿಖೆ ನಡೆಸಬೇಕು, ದೌರ್ಜನ್ಯ ನಿಲ್ಲಬೇಕು ಎಂದು ಆಗ್ರಹಿಸಿದರು.

ಬಳಿಕ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಪ್ರಾಣೇಶ್, ಆರು ಕೋಟಿ ಜನರನ್ನು ನಾವು 75 ಮಂದಿ ಪ್ರತಿನಿಧಿಸುತ್ತಿದ್ದೇವೆ. ಆದರೆ, ಸದನ ಕಲಾಪ ನಿರೀಕ್ಷಿತ ನಿಟ್ಟಿನಲ್ಲಿ ಸಾಗುತ್ತಿಲ್ಲ. ಅನಗತ್ಯ ಚರ್ಚೆಗೆ ಸದನ ಬಳಕೆ ಆಗಬಾರದು. ಹೋರಾಟಕ್ಕೆ ಪ್ರತಿಯೊಬ್ಬರಿಗೂ ಅವಕಾಶ ಇದೆ. ಆದರೆ ಇದರ ಇತಿಮಿತಿ ಮೀರಿ ಹೋದಾಗ ತಡೆಯುವುದು ಅನಿವಾರ್ಯ. ಇನ್ನು ಮಂಗಳೂರಿನಲ್ಲಿ ನೂರಾರು ಜನರ ಜೀವ ಉಳಿಸಲು ಒಂದಿಬ್ಬರ ಸಾವಾಗಿದೆ, ಅದರಲ್ಲಿ ತಪ್ಪೇನಿದೆ ಎಂದು ಹೇಳುತ್ತಿದ್ದಂತೆಯೇ ಪ್ರತಿಪಕ್ಷದ ಸದಸ್ಯರು ತೀವ್ರ ಆಕ್ರೋಶ ಹೊರಹಾಕಿದರು. ಅಲ್ಲದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ಸಂದರ್ಭ 10 ನಿಮಿಷಗಳ ಕಾಲ ಸದನವನ್ನು ಸಭಾಪತಿಗಳು ಮುಂದೂಡಿದರು.

ವಿಷಾದ ವ್ಯಕ್ತಪಡಿಸಿದ ಪ್ರಾಣೇಶ್

ಹತ್ತು ನಿಮಿಷ ನಂತರ ಆರಂಭವಾದ ಪರಿಷತ್ ಕಲಾಪ ಪ್ರತಿಭಟನೆ ಮೂಲಕವೇ ಆರಂಭವಾಯಿತು. ಇಬ್ಬರು ಅಮಾಯಕರು ಸಾವನ್ನಪ್ಪಿದ್ದಾರೆ. ವಿಷಾದ ವ್ಯಕ್ತಪಡಿಸುವ ಕಾರ್ಯ ಆಗಬೇಕು. ಅವರು ತಮ್ಮ ಮಾತಿಗೆ ಕ್ಷಮೆ ಕೋರಬೇಕೆಂದು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಣೇಶ್, ಶಬ್ದವನ್ನು ಬೇರೆ ರೀತಿ ಅರ್ಥೈಸುವುದು ಬೇಡ. ಒಂದು ಶಬ್ದಕ್ಕೆ ಹಲವು ಅರ್ಥ ಇರಲಿದೆ. ಅಂದು ಸತ್ತವರ ಬಗ್ಗೆ ವಿಷಾದ ಇದೆ. ಪ್ರತಿಯೊಂದು ಜೀವವೂ ಅಮೂಲ್ಯ ಎಂದರು. ಬಳಿಕ ಪ್ರತಿಭಟನೆ ಕೈಬಿಟ್ಟ ಪ್ರತಿಪಕ್ಷ ಸದಸ್ಯರು ಬಾವಿಯಿಂದ ತಮ್ಮ ಸ್ಥಾನಕ್ಕೆ ಹಿಂತಿರುಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News