ಮಂಗಳೂರು ಹಿಂಸಾಚಾರದ ಸಂದರ್ಭ 66 ಗುಂಡುಗಳ ಹಾರಾಟ: ಗೃಹ ಸಚಿವ ಬೊಮ್ಮಾಯಿ

Update: 2020-02-19 16:32 GMT

ಬೆಂಗಳೂರು, ಫೆ.19: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ಹಾಗೂ ಬೀದರ್ ಜಿಲ್ಲೆಯ ಶಾಹೀನ್ ಶೈಕ್ಷಣಿಕ ಸಂಸ್ಥೆಯ ವಿರುದ್ಧ ದಾಖಲಿಸಿರುವ ದೇಶದ್ರೋಹದ ಪ್ರಕರಣವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸದನದಲ್ಲಿಂದು ಸಮರ್ಥಿಸಿಕೊಂಡಿದ್ದನ್ನು ಖಂಡಿಸಿ, ವಿರೋಧ ಪಕ್ಷ ಕಾಂಗ್ರೆಸ್ ಸಭಾತ್ಯಾಗ ನಡೆಸಿತು. 

ಮಂಗಳೂರು ಗಲಭೆ, ಶಾಹೀನ್ ಶಿಕ್ಷಣ ಸಂಸ್ಥೆಯ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯಮ 69ರಡಿಯಲ್ಲಿ ನಡೆದ ಚರ್ಚೆಗೆ ಸಂಬಂಧಿಸಿದಂತೆ ಬುಧವಾರ ವಿಧಾನಸಭೆಯಲ್ಲಿ ಬಸವರಾಜ ಬೊಮ್ಮಾಯಿ ಉತ್ತರ ನೀಡಿದರು.

ಮಂಗಳೂರಿನಲ್ಲಿ ಪೊಲೀಸರಿಂದ ಯಾವುದೇ ರೀತಿಯ ಅಚಾತುರ್ಯವಾಗಿಲ್ಲ. ಉದ್ದೇಶಪೂರ್ವಕವಾಗಿ ಗೋಲಿಬಾರ್ ನಡೆಸಲಾಗಿಲ್ಲ. ಪರಿಸ್ಥಿತಿಯನ್ನು ನಿಯಂತ್ರಿಸಲು ಅನಿವಾರ್ಯವಾಗಿ ಗೋಲಿಬಾರ್ ನಡೆಸಲಾಯಿತು. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆಗಳಿಗೆ ಅವಕಾಶ ನೀಡಿದ್ದೇವೆ. ಯಾರ ಹಕ್ಕನ್ನು ದಮನ ಮಾಡಲು ಸರಕಾರ ಯತ್ನಿಸಿಲ್ಲ ಎಂದು ಅವರು ಹೇಳಿದರು.

ಡಿ.19ರಂದು ಮಂಗಳೂರಿನಲ್ಲಿ ಸೆಕ್ಷನ್ 144 ಹೇರಿರುವ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಸಾಮಾಜಿಕ ಜಾಲತಾಣ, ಪ್ರಮುಖ ಪತ್ರಿಕೆಗಳು ಹಾಗೂ ಸ್ವತಃ ಪೊಲೀಸರು ಹ್ಯಾಂಡ್ ಲೌಡ್ ಸ್ಪೀಕರ್ ಮೂಲಕ ಜನರಿಗೆ ತಿಳಿಸುವ ಕೆಲಸವನ್ನು ಮಾಡಿದರು. ಆದರೆ, ಮಂಗಳೂರಿನಲ್ಲಿ ಅಹಿತಕರ ಘಟನೆಗಳು ನಡೆಯಬಹುದು ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ 144 ಸೆಕ್ಷನ್ ಹಾಕಲಾಗಿತ್ತು ಎಂದು ಬೊಮ್ಮಾಯಿ ತಿಳಿಸಿದರು.

ಗೋಲಿಬಾರ್ ನಡೆಸಲು ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳಿವೆ ಅದರಂತೆ ಪೊಲೀಸರು ಮೊದಲು ಅಶ್ರುವಾಯುವಿನ 106 ಶೆಲ್ ಬಳಕೆ ಮಾಡಿದರು. ಆನಂತರ ಗುಂಪು ಚದುರಿಸಲು ಲಾಠಿಚಾರ್ಜ್ ನಡೆಸಿದರು. ಬಳಿಕ, 47 ರಬ್ಬರ್ ಬುಲೇಟ್ ಹಾರಿಸಲಾಯಿತು ಎಂದು ಅವರು ಹೇಳಿದರು.

56 ಮಾದರಿಯ ಬಂದೂಕಿನಿಂದ 10 ಹಾಗೂ 303 ಮಾದರಿಯ ಬಂದೂಕಿನಿಂದ 10, ಎಸ್‌ಎಲ್‌ಆರ್ ಇಂದ 36 ಸೇರಿದಂತೆ ಒಟ್ಟು 66 ಗುಂಡುಗಳನ್ನು ಹಾರಿಸಲಾಯಿತು. ಈ ಸಂದರ್ಭದಲ್ಲಿ ಇಬ್ಬರು ಅಸುನೀಗಿದ್ದಾರೆ. ಸೆಕ್ಷನ್ 144 ಜಾರಿಯಲ್ಲಿರುವಾಗ ಪ್ರತಿಭಟನೆ ನಡೆಸದಂತೆ ಪೊಲೀಸರು, ಕಾಸರಗೋಡಿನ ಖಾಝಿ ಸೇರಿದಂತೆ ಸ್ಥಳೀಯ ಪ್ರಮುಖರು ಎಷ್ಟೇ ಮನವಿಗಳನ್ನು ಮಾಡಿದರೂ ಪ್ರತಿಭಟನಾಕಾರರರು ಹಿಂದಕ್ಕೆ ಸರಿಯಲಿಲ್ಲ ಎಂದು ಬೊಮ್ಮಾಯಿ ತಿಳಿಸಿದರು.

ಇಡೀ ರಾಜ್ಯದಲ್ಲಿ ಸಿಎಎ ವಿರುದ್ಧ 736 ಪ್ರತಿಭಟನೆಗಳು ನಡೆದಿದ್ದು, ಎಲ್ಲ ಕಡೆ ಪೊಲೀಸರು ಬೀಗಿ ಬಂದೋಬಸ್ತ್ ಮಾಡಿದ್ದರು. ಬೆಂಗಳೂರಿನಲ್ಲಿ 5-6 ಬಾರಿ, ಗುಲ್ಬರ್ಗ, ಬೀದರ್, ಹುಬ್ಬಳ್ಳಿಯಲ್ಲಿ ಪ್ರತಿಭಟನೆಗಳು ನಡೆದಿವೆ. ಎಲ್ಲಿಯೂ ಗಲಭೆಗಳು ಆಗಿಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗಿಲ್ಲ. ಇದಕ್ಕಾಗಿ ಆಯೋಜಕರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಟೈರುಗಳನ್ನು ನುಗ್ಗಿಸಲು ಯತ್ನಿಸಿದರು, ಸಿಸಿಟಿವಿ ಕ್ಯಾಮರಾಗಳನ್ನು ಗುರಿಯನ್ನಾಗಿಸಿ ದಾಳಿ ಮಾಡಲಾಗಿದೆ. ಆಟೋಗಳು, ಟೆಂಪೋಗಳಲ್ಲಿ ಕಲ್ಲುಗಳನ್ನು ಸಾಗಿಸಲಾಗಿದೆ. ಬಂದೂಕುಗಳನ್ನು ಮಾರಾಟ ಮಾಡುವ ಅಂಗಡಿಯ ಬಾಗಿಲನ್ನು ಮುರಿದು ಒಳಪ್ರವೇಶಿಸಲು ಗಲಭೆಕೋರರು ಯತ್ನಿಸಿದರು ಎಂದು ಬೊಮ್ಮಾಯಿ ತಿಳಿಸಿದರು.

ಕಾಸರಗೋಡಿನಿಂದ ಮಂಗಳೂರಿಗೆ ಬರಲು ನೂರಾರು ದಾರಿಗಳಿವೆ. 45 ನಿಮಿಷದಲ್ಲಿ ತಲುಪಬಹುದು. ಗಲಭೆ ನಡೆದ ಪ್ರದೇಶದಲ್ಲಿ ಮೊಬೈಲ್ ಟವರ್ ಮೂಲಕ ಪತ್ತೆ ಹಚ್ಚಿದಾಗ ಕಾಸರಗೋಡಿನಲ್ಲಿ ನೋಂದಣಿಯಾಗಿರುವ 1300 ನಂಬರ್‌ಗಳು ಪತ್ತೆಯಾಗಿವೆ. ಈ ಪೈಕಿ 373 ಮಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 20 ಹಾಗೂ ದಕ್ಷಿಣ ಪೊಲೀಸ್ ಠಾಣೆಯಲ್ಲಿ 30 ಜನರನ್ನು ಬಂಧಿಸಲಾಗಿದೆ. ಹಿಂಸೆಯನ್ನು ಯಾರೂ ಬೆಂಬಲಿಸಬಾರದು. ಸಂದರ್ಭಕ್ಕೆ ತಕ್ಕಂತೆ ಪೊಲೀಸರು ಕ್ರಮ ತೆಗೆದುಕೊಳ್ಳದೇ ಹೋಗಿದ್ದರೆ, ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಬೊಮ್ಮಾಯಿ ತಿಳಿಸಿದರು.

ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಆಸ್ಪತ್ರೆಗೆ ನುಗ್ಗಿದ್ದರು. ಅವರನ್ನು ಹೊರಗೆ ತರಲು ಪೊಲೀಸರು ಆಸ್ಪತ್ರೆ ಒಳಗೆ ಹೋಗಬೇಕಾಯಿತು. ಇದನ್ನು ಅಲ್ಲಿನ ವೈದ್ಯರೇ ಸ್ಪಷ್ಟಪಡಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಎಷ್ಟು ಗೋಲಿಬಾರ್ ಪ್ರಕರಣಗಳಲ್ಲಿ ನ್ಯಾಯಾಂಗ ತನಿಖೆಯಿಂದ ಏನು ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಎಚ್‌ಆರ್‌ಸಿ ಮಾರ್ಗಸೂಚಿಯಂತೆ ಮ್ಯಾಜಿಸ್ಟ್ರೇಟ್ ಮೂಲಕ ತನಿಖೆ ಮಾಡಿಸುತ್ತಿದ್ದು, ಈಗಾಗಲೇ ಅವರು ಮಧ್ಯಂತರ ವರದಿ ನೀಡಿದ್ದಾರೆ. ಸಿಐಡಿ ತನಿಖೆಯೂ ನಡೆಯುತ್ತಿದೆ. ಫೆ.24ರಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪೀಠದ ಎದುರು ಈ ಪ್ರಕರಣ ವಿಚಾರಣೆಗೆ ಬರುತ್ತೆ. ಆಗ ಮಧ್ಯಂತರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.

ಸೌದಿ ಅರೇಬಿಯಾದಿಂದ ಬೆದರಿಕೆ ಕರೆಗಳು
ಕಾಸರಗೋಡಿನಲ್ಲಿ ಖಾಝಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ಹಿಂಪಡೆದರು. ಖಾಝಿಯವರಿಗೆ, ಶಾಸಕರು, ಸಂಸದರಿಗೆ ಸೌದಿ ಅರೇಬಿಯಾ, ದುಬೈ ಸೇರಿದಂತೆ ಇನ್ನಿತರ ದೇಶಗಳಿಂದ ಬೆದರಿಕೆ ಕರೆಗಳು ಬಂದಿವೆ. ನನಗೂ ಹಾಗೂ ಮುಖ್ಯಮಂತ್ರಿಗೂ ಬೆದರಿಕೆ ಕರೆಗಳು ಬಂದಿವೆ. ಇದು ಅತೀ ದೊಡ್ಡ ಸಂಚಾಗಿದ್ದು, ಅಂತರ್‌ರಾಷ್ಟ್ರೀಯ ಮಟ್ಟದ ಸಂಪರ್ಕವಿದೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News