ಗದ್ದಲಕ್ಕೆ ವೇದಿಕೆ ಕಲ್ಪಿಸಿದ 'ಕೊರೊನಾ ವೈರಸ್': ಕೆರಳಿದ ಬಿಜೆಪಿ ಶಾಸಕ ಹೇಳಿದ್ದೇನು ?

Update: 2020-02-19 16:55 GMT

ಬೆಂಗಳೂರು, ಫೆ.19: ಅನರ್ಹ ಶಾಸಕರು ಕೊರೊನಾ ವೈರಸ್ ಇದ್ದಂತೆ ಎಂದು ಆರೆಸ್ಸೆಸ್ ಮುಖಂಡರೊಬ್ಬರು ಹೇಳಿದ್ದಾರೆಂಬ ಕಾಂಗ್ರೆಸ್ ಪಿ.ಆರ್.ರಮೇಶ್ ಹೇಳಿಕೆ ಸದನದಲ್ಲಿ ಕೆಲವೊತ್ತು ವಾದ, ಪ್ರತಿವಾದಕ್ಕೆ ವೇದಿಕೆ ಕಲ್ಪಿಸಿತು.

ಬುಧವಾರ ನಿಯಮ 68ರಡಿ ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪುರ ಮಾತನಾಡುತ್ತಾ, ಈ ಹಿಂದೆ ಗೋಲಿಬಾರ್ ನಡೆಸಿದ ಸರಕಾರಕ್ಕೆ ಜನತೆ ತಕ್ಕಪಾಠ ಕಲಿಸಿದ್ದಾರೆ. ನಿಮಗೂ ಕೂಡ ಅದೇ ಪರಿಸ್ಥಿತಿ ಬರುತ್ತದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ನಾರಾಯಣಸ್ವಾಮಿ, ಅನರ್ಹ ಸರಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದರು.

ಇವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಬಿ.ಸಿ.ಪಾಟೀಲ್ ಮತ್ತು ಎಸ್.ಟಿ.ಸೋಮಶೇಖರ್, ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿಟ್ಟುಕೊಳ್ಳಿ. ನೀವು ನಮ್ಮನ್ನು ಅನರ್ಹರನ್ನಾಗಿ ಮಾಡಿದ್ದೀರಿ. ಜನತಾ ನ್ಯಾಯಾಲಯದಲ್ಲಿ ನಾವು ಅರ್ಹರಾಗಿ ಬಂದಿದ್ದೇವೆ. ಈ ಪದ ಬಳಸಬಾರದೆಂದು ಏರಿದ ದನಿಯಲ್ಲೇ ತರಾಟೆಗೆ ತೆಗೆದುಕೊಂಡರು.

ಆಗ ಐವನ್ ಡಿಸೋಜಾ, ಸುಪ್ರೀಂಕೋರ್ಟ್ ಕೂಡ ನಿಮ್ಮ ಅನರ್ಹತೆಯನ್ನು ಎತ್ತಿ ಹಿಡಿದಿದೆ. ಅದಕ್ಕಾಗಿ ಇಲ್ಲಿ ನಾವು ಬಳಕೆ ಮಾಡುತ್ತಿದ್ದೇವೆ. ನಮ್ಮ ದೃಷ್ಟಿಯಲ್ಲಿ ಈಗಲೂ ನೀವು ಅನರ್ಹರು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಮ್ಮ ಯೋಗ್ಯತೆಗೆ ಉಪಚುನಾವಣೆಯಲ್ಲಿ ಜನತೆ 2 ಸ್ಥಾನ ಕೊಟ್ಟಿದ್ದಾರೆ. ನಾವು 12 ಸ್ಥಾನ ಗೆದ್ದು ಬಂದಿದ್ದೇವೆ. ನೀವು ನಮ್ಮನ್ನು ಅನರ್ಹರನ್ನಾಗಿ ಮಾಡಿರಬಹುದು. ಆದರೆ, ಜನರು ನಮ್ಮನ್ನು ಅರ್ಹರನ್ನಾಗಿ ಮಾಡಿದ್ದಾರೆ. ಈಗ ಗೆದ್ದು ಬಂದು ಸಚಿವರಾಗಿದ್ದೇವೆ ಎಂದು ತಿರುಗೇಟು ನೀಡಿದರು.

ಈ ವೇಳೆ ಕಾಂಗ್ರೆಸ್‌ನ ಪಿ.ಆರ್.ರಮೇಶ್, ಅರೆಸ್ಸೆಸ್‌ನ ಮುಖಂಡರೊಬ್ಬರು 17 ಮಂದಿ ಶಾಸಕರು ವೈರಸ್ ಎಂದು ಹೇಳಿದ್ದಾರೆ. ನೀವು ಇದಕ್ಕೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಈ ರೀತಿ ಮಾತನಾಡುವುದು ಸರಿಯಲ್ಲ. ಆ ರೀತಿ ಯಾರೊಬ್ಬರೂ ಹೇಳಿಲ್ಲ, ಸದನಕ್ಕೆ ನೀವು ತಪ್ಪುಮಾಹಿತಿ ನೀಡಬೇಡಿ ಎಂದು ಹೇಳಿದರು.

ಪಿ.ಆರ್.ರಮೇಶ್ ಮಾತಿಗೆ ಕೆರಳಿದ ಎಸ್.ಟಿ.ಸೋಮಶೇಖರ್, ನಾವು ವೈರಸ್ಸೋ ಅಥವಾ ಇನ್ನೇನೋ ಅದನ್ನು ಕಟ್ಟಿಕೊಂಡು ನಿಮಗೇನು. ನಿಮ್ಮಲ್ಲಿ ದೊಡ್ಡ ದೊಡ್ಡ ಕೊರೊನಾ ವೈರಸ್‌ಗಳಿದ್ದಾರೆ. ಅದನ್ನು ಸರಿಪಡಿಸಿಕೊಳ್ಳಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಬೇರೆಯವರ ತಟ್ಟೆಯಲ್ಲಿ ಬಿದ್ದಿರುವ ನೊಣಗಳನ್ನೇಕೆ ನೋಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.

ಈ ಹಂತದಲ್ಲಿ ಕಾಂಗ್ರೆಸ್‌ನ ನಾರಾಯಣಸ್ವಾಮಿ, ನೀವು ನಮ್ಮ ಸ್ನೇಹಿತರು. ನಿಮಗೆ ಅನ್ಯಾಯವಾಗಬಾರದು. ನಿಮ್ಮ ಹಿತದೃಷ್ಟಿಯಿಂದ ನಾನು ಹೇಳುತ್ತಿದ್ದೇನೆಂದು ಸಮರ್ಥಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News