ಕಾರವಾರ: ಬೈತಖೋಲ್ ಬಂದರಿನಲ್ಲಿ ಬಲೆಗೆ ಬಿದ್ದ ಬೃಹತ್ ಮೀನುಗಳು

Update: 2020-02-19 17:22 GMT

ಕಾರವಾರ, ಫೆ.19: ನಗರದ ಬೈತಖೋಲ್ ಬಂದರಿನಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಗೆ ಬೃಹತ್ ಗಾತ್ರದ ಮೀನುಗಳು ಬೆಲೆಗೆ ಬಿದ್ದಿವೆ.

ಕಳೆದ ರಾತ್ರಿ ಮೀನುಗಾರಿಕೆಗೆ ತೆರಳಿ ಬುಧವಾರ ಬೆಳಗ್ಗೆ ವಾಪಸ್ಸಾಗಿದ್ದ ಯಾಂತ್ರಿಕೃತ ಬೋಟಿಗೆ ಅಬ್ಬನಾಸ್ ಎನ್ನುವ ಪ್ರಜಾತಿಯ ಮೀನು ಬಲೆಗೆ ಬಿದ್ದಿದೆ. ಮನುಷ್ಯನ ದೇಹದ ಗಾತ್ರದಷ್ಟು ಎತ್ತರ ಇರುವ ಇದು ಸುಮಾರು 150 ರಿಂದ 200 ಕೆ.ಜಿ. ತೂಕ ಭಾರವಿದೆ. ಈ ಮೀನಿನ ವೈಜ್ಞಾನಿಕ ಹೆಸರು ಯಲ್ಲೊಪಿನ್ ಟೂನಾ ಎಂದು ತಜ್ಞರು ತಿಳಿಸಿದ್ದಾರೆ.

ಇದರ ಹೊಟ್ಟೆಯ ಭಾಗ ಮತ್ತು ಬೆನ್ನಮೇಲೆ ದೊಡ್ಡದಾಗಿರುವ ಹಳದಿ ಬಣ್ಣದ ಚಿಕ್ಕ ರೆಕ್ಕಗಳಿದ್ದು ರೆಕ್ಕೆ ಮತ್ತು ಬಾಲದ ನಡುವೆ ಸಣ್ಣ ಸಣ್ಣ ರೆಕ್ಕೆಗಳು ಇರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಸ್ಥಳೀಯವಾಗಿ ಇದಕ್ಕೆ ದೊಡ್ಡ ಗೇದಾರ, ಔರಿ ಮೀನು, ಪಿಂಪ್, ಅಬ್ಬನಾಸ್ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಈ ಮೀನು ಒಂಬತ್ತು ವರ್ಷ ಜೀವಿಸುತ್ತದೆ. ಈ ಅವಧಿಯಲ್ಲಿ ಸುಮಾರು 2.4 ಮೀಟರ್ ಉದ್ದ ಬೆಳೆಯುತ್ತದೆ. ಸ್ಥಳೀಯರು ಈ ಮೀನನ್ನು ಆಹಾರಕ್ಕೆ ಬಳಸುವುದು ಕಡಿಮೆ. ಇದರ ಗರ್ಭಕೋಶ, ಶ್ವಾಸಕೋಶವು ಔಷಧೀಯ ಗುಣಗಳನ್ನು ಹೊಂದಿದ್ದು, ಮಂಗಳೂರು, ಕೇರಳ, ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ.

ಅಲ್ಲದೆ, ಬುಧವಾರ ಬೆಳಗ್ಗೆ ಇಚ್ಚ್ ಮೀನು ಎಂದು ಕರೆಯಲಾಗುವ ಮೀನೂ ಮೀನುಗಾರರ ಬಲೆಗೆ ಸಿಕ್ಕಿದೆ. ಇದನ್ನು ಎಚನೀಸ್ ನೌಕ್ರೆಟಸ್ ಎಂದೂ ಕರೆಯಲಾಗುತ್ತದೆ. ಇದು ಇದು ಆಳ ಸಮುದ್ರದಲ್ಲಿ ಮಾತ್ರ ಇರುತ್ತದೆ. ಇದರ ತಲೆಯ ಮೇಲೆ ಹರಿತವಾದ ಅಸ್ತ್ರದ ಮಾದರಿಯದ್ದಾಗಿದ್ದು ಅದರ ಸಹಾಯದಿಂದ ಇತರ ಮೀನುಗಳನ್ನು ಬೇಟೆಯಾಡುತ್ತದೆ ಎಂದು ಸ್ಥಳೀಯ ಮೀನುಗಾರರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News