ಮೈಸೂರು: ಬೃಹತ್ ಉದ್ಯೋಗ ಮೇಳಕ್ಕೆ ಬಾರದ ಕಂಪೆನಿಗಳು; ನಿರಾಸೆಯಿಂದ ಉದ್ಯೋಗಾಕಾಂಕ್ಷಿಗಳು ವಾಪಸ್

Update: 2020-02-19 17:43 GMT

ಮೈಸೂರು,ಫೆ.19: ನಗರದಲ್ಲಿ ನಡೆದ ಬೃಹತ್ ಉದ್ಯೋಗ ಮೇಳಕ್ಕೆ ಉದ್ಯೋಗಾಕಾಂಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದರಾದರೂ ಅವಕಾಶ ನೀಡುವ ಪ್ರತಿಷ್ಠಿತ ಕಂಪನಿಗಳು ಗೈರಾಗುವ ಮೂಲಕ ನಿರಾಸೆಯನ್ನುಂಟು ಮಾಡಿದವು.

ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಬುಧವಾರ ಮತ್ತು ಗುರುವಾರ ಕೌಶಲಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಉದ್ಯೋಗ ಮೇಳಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಬರೀ ಎಸೆಸೆಲ್ಸಿ, ಪಿಯುಸಿ, ಐಟಿಐ ಮತ್ತು ಡಿಪ್ಲೊಮೊ ವಿದ್ಯಾಭ್ಯಾಸ ಹೊಂದಿದ ವಿದ್ಯಾರ್ಥಿಗಳಿಗಷ್ಟೆ ಉದ್ಯೋಗದ ಮಾರ್ಗದರ್ಶನ ದೊರಕಿದ್ದು ಬಿಟ್ಟರೆ  ಸ್ನಾತಕೋತ್ತರ ಅಧ್ಯಯನ ಮಾಡಿ ಅನುಭವ ಪಡೆದಿರುವ ಉದ್ಯೋಗಕಾಂಕ್ಷಿಗಳಿಗೆ ಅವಕಾಶವೇ ಇಲ್ಲದಂತೆ ಆಯಿತು.

ಜಿಲ್ಲಾಡಳಿತ ಸಾಕಷ್ಟು ಉತ್ಸಾಹದಲ್ಲಿ ಈ ಮೇಳವನ್ನು ಆಯೋಜಿಸಿತ್ತಾದರೂ ಸಂಬಂಧ ಪಟ್ಟ ಇಲಾಖೆ ಸಚಿವರುಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗೈರಾಗುವ ಮೂಲಕ ನೆಪಮಾತ್ರಕ್ಕೆ ಉದ್ಯೋಗ ಮೇಳ ನಡೆದಿದೆ ಎಂದು ಅಲ್ಲಿಗೆ ಆಗಮಿಸಿದ್ದ ಉದ್ಯೋಗಾಕಾಂಕ್ಷಿಗಳ ಪೋಷಕರು ಹೇಳುತ್ತಿದ್ದುದು ಸಾಮಾನ್ಯವಾಗಿತ್ತು.

ಸಾಕಷ್ಟು ಮಳಿಗೆಗಳನ್ನು ತೆರೆಯಲಾಗಿತ್ತಾದರೂ, ಉದ್ಯೋಗಕಾಂಕ್ಷಿಗಳಿಂದ ದಾಖಲೆಗಳನ್ನು ಮಾತ್ರ ಪಡೆದು ನಿಮಗೆ ಕರೆ ಮಾಡುವುದಾಗಿ ಭಾಗವಹಿಸಿದ್ದ ಕೆಲವು ಕಂಪನಿಗಳು ಮತ್ತು ಸಂಸ್ಥೆಗಳು ಹೇಳುತ್ತಿದ್ದವು. ಬಿ.ಇ, ಎಂಟೆಕ್, ಎಂಎಸ್ಸಿ, ಎಂಬಿಎ, ಬಯೋಟೆಕ್ ಸೇರಿದಂತೆ ಅನೇಕ ಸ್ನಾತಕೋತ್ತರ ಪದವಿ ಪಡೆದ ಉದ್ಯೋಗಾಂಕ್ಷಿಗಳಿಗೆ ಉದ್ಯೋಗದ ಭರವಸೆಯಿರಲಿ, ಅವರ ಓದಿಗೆ ಬೆಲೆಯೇ ಇಲ್ಲದಂತೆ ವಾಪಸ್ ತೆರಳಿದರು.

ಈ ಸಂಬಂಧ ಮಾಧ್ಯಮದವರೊಂದಿಗೆ ಜಿ.ಪಂ. ಸಿಇಓ ಕೆ.ಜ್ಯೋತಿ ಮಾತನಾಡಿ, ನಾವು ಪ್ರತಿಷ್ಠಿತ ಕಂಪನಿಗಳಿಗೆ ಅಹ್ವಾನ ನೀಡಿದ್ದೆವು. ಅವರು ಗೈರಾಗಿದ್ದಾರೆ. ಬಲವಂತವಾಗಿ ನಾವು ಅವರನ್ನು ಉದ್ಯೋಗ ಕೊಡಿ ಎಂದು ಹೇಳಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶವಿದೆ. ಆ ಹಿನ್ನಲೆಯನ್ನಿಟ್ಟುಕೊಂಡು ಅವರನ್ನು ಆಹ್ವಾನಿಸಿದ್ದೆವು. ಆವರು ಬಂದಿಲ್ಲ. ಇದು ನಮಗೆ ಮೊದಲ ಅನುಭವ, ಮುಂದೆ ಎಲ್ಲರೂ ಭಾಗವಹಿಸುವಂತೆ ನಿಗಾ ವಹಿಸಲಾಗುವುದು ಎಂದು ಹೇಳಿದರು.

ಉದ್ಯೋಗ ಮೇಳಗಳು ಆಗೊಮ್ಮೆ ಈಗೊಮ್ಮೆ ನಡೆದರೆ ಸಾಲದು, ಪ್ರತಿ ಆರು ತಿಂಗಳಿಗೊಮ್ಮೆ ಇಂತಹ ಉದ್ಯೋಗ ಮೇಳಗಳು ನಡೆದರೆ ನಿರುದ್ಯೋಗಿಗಳಿಗೆ ಆಶ್ರಯ ನೀಡಬಹುದು. ಅವರು ವಿದ್ಯಾಭ್ಯಾಸ ಮಾಡಿರುವ ತಕ್ಕಂತೆ ಉದ್ಯೋಗಳನ್ನು ನೀಡಬೇಕಾಗಿದೆ. ಜೊತೆಗೆ ಕಂಪನಿಗಳಿಗೆ ಬೇಕಾಗುವ ಅರ್ಹ ವಿದ್ಯಾಭ್ಯಾಸ ಹೊಂದಿರುವವರು ಈ ಮೇಳಗಳಲ್ಲಿ ಭಾಗವಹಿಸಬೇಕಾಗಿದೆ ಎಂದು ಹೇಳಿದರು.

ಹೆಸರು ಹೇಳಲು ಇಚ್ಚಿಸದ ಮತ್ತೊಬ್ಬ ಅಧಿಕಾರಿ ಮಾತನಾಡಿ, ಸಾಕಷ್ಟು ಉದ್ಯೋಗಗಳ ಅವಕಾಶ ಇದೆ. ಆದರೆ ಕಂಪನಿಗಳು ಮುಂದೆ ಬರುತ್ತಿಲ್ಲ, ಕಾರಣ ದೇಶದಲ್ಲಿ ಕುಸಿತಗೊಂಡಿರುವ ಆರ್ಥಿಕತೆ, ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ತೆರಿಗೆ ಸಂಗ್ರಹ, ಜಿಎಸ್‍ಟಿ ಹೊಡೆತ ಕೈಗಾರಿಕೆಗಳು ಮುಚ್ಚುವಂತಾಗಿದೆ. ನೂರು ಮಂದಿ ಕೆಲಸ ಮಾಡುತ್ತಿದ್ದ ಒಂದು ಕಂಪನಿಯಲ್ಲಿ ಈಗ ಕೇವಲ 20 ಮಂದಿಗೆ ಇಳಿಕೆಯಾಗಿದೆ. ಕೈಗಾರಿಕೆಗಳು ಉತ್ಪಾದನೆಯನ್ನು ಹೆಚ್ಚು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಉದ್ಯೋಗಗಳು ಕಡಿಮೆಯಾಗುತ್ತಿವೆ. ಈ ಎಲ್ಲಾ ಬೆಳವಣಿಗೆಯಿಂದ ಸಾಕಷ್ಟು ಕೈಗಾರಿಗಕೆಗಳು ಈ ಮೇಳದಲ್ಲಿ ಭಾಗವಹಿಸಿಲ್ಲ ಎಂದು ಹೇಳಿದರು.

ಇದಕ್ಕೂ ಮೊದಲು ಉದ್ಯೋಗಮೇಳವನ್ನು ಜಿ.ಪಂ.ಅಧ್ಯಕ್ಷ ಪರಿಮಳಾ ಶ್ಯಾಂ ಉದ್ಘಾಟಸಿದರು. ಇದೇ ವೇಳೆ ಮೈಸೂರು ಮೇಯರ್ ತಸ್ನೀಂ, ಜಿ.ಪಂ. ಸಿಇಓ ಕೆ.ಜ್ಯೋತಿ, ಜಿ.ಪಂ.ಸದಸ್ಯೆ ಮಂಗಳಾ ಸೋಮಶೇಖರ್, ಕೌಶಲ್ಯಾಭಿವೃದ್ದಿ ಜಿಲ್ಲಾ ಅಧಿಕಾರಿ ಶಿವಣ್ಣ ಎನ್.ಎಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News