ಯು.ಟಿ.ಖಾದರ್ ಪ್ರಚೋದನೆ ಮಂಗಳೂರು ಗಲಭೆಗೆ ಕಾರಣ: ಸುನೀಲ್‌ ಕುಮಾರ್

Update: 2020-02-19 17:57 GMT

ಬೆಂಗಳೂರು, ಫೆ.19: ಮಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ನೀಡಿದ ಪ್ರಚೋದನಾತ್ಮಕ ಹೇಳಿಕೆಯಿಂದಲೇ ಗಲಭೆ ನಡೆಯಿತು. ಪೊಲೀಸರ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿತ್ತು ಎಂದು ಬಿಜೆಪಿ ಸದಸ್ಯ ವಿ.ಸುನೀಲ್‌ ಕುಮಾರ್ ಆರೋಪಿಸಿದರು.

ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಗೋಲಿಬಾರ್‌ನಲ್ಲಿ ಮೃತಪಟ್ಟವರನ್ನು ಅಮಾಯಕರು ಅಂತಾರೆ. ಜಲೀಲ್ ವಿರುದ್ಧ ಹಲವು ಪ್ರಕರಣಗಳಿವೆ. ಹಲವಾರು ಮಂದಿ ಪೊಲೀಸರು ಗಾಯಾಳುಗಳಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸುನೀಲ್ ಕುಮಾರ್ ನೀವು ಸುಮ್ಮನೆ ಆರೋಪ ಮಾಡಬೇಡಿ. ಎಷ್ಟು ಮಂದಿ ಪೊಲೀಸರಿಗೆ ಈ ಘಟನೆ ವೇಳೆ ಗಾಯಗಳಾಗಿವೆ. ಯಾವ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಎಂಬುದನ್ನು ಸದನದಲ್ಲಿ ಮೊದಲು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.

ಪೊಲೀಸರು ಕಲ್ಲು ತೂರಾಟ ನಡೆಸಿರುವುದಕ್ಕೆ ದಾಖಲೆಗಳಿವೆ. ಪಿಎಫ್‌ಐ ಸೇರಿದಂತೆ ಯಾರೇ ಆಗಲಿ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸಿದರೆ ಮುಲಾಜಿಲ್ಲದೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ, ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು. ಸುನೀಲ್ ಕುಮಾರ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ನಿಮ್ಮ ಬಳಿ ದಾಖಲೆಗಳಿದ್ದರೆ ಅದನ್ನು ಹೈಕೋರ್ಟ್ ಕೊಡಿ, ಇಲ್ಲಿ ಪ್ರದರ್ಶಿಸಿ ಏನು ಪ್ರಯೋಜನ. ನಿನ್ನೆ ಅವರಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಜಾಮೀನು ಅರ್ಜಿ ವಿಚಾರಣೆ ವೇಳೆ ಈ ದಾಖಲಾತಿಗಳನ್ನು ಸರಕಾರಿ ವಿಶೇಷ ಅಭಿಯೋಜಕರಿಗೆ ಹಸ್ತಾಂತರಿಸಬಹುದಾಗಿತ್ತಲ್ಲ ಎಂದರು.

ಈ ವೇಳೆ ಮಾತು ಮುಂದುವರೆಸಿದ ಸುನೀಲ್ ಕುಮಾರ್, ಖಾದರ್ ಮೂಲಕ ಪ್ರಚೋದನೆಯಿಂದ ಈ ಗಲಭೆ ನಡೆದಿದೆ. ಪೊಲೀಸರು ದಿಟ್ಟ ಕ್ರಮ ಕೈಗೊಂಡಿದ್ದಾರೆ. ಇದು ಹೇಡಿ ಸರಕಾರವಲ್ಲ, ರಾಜಾಹುಲಿ ಸರಕಾರ. ದೇಶದ್ರೋಹಿ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕೇರಳದಿಂದ ಮಂಗಳೂರಿಗೆ ಬಂದು ಗಲಾಟೆ ಮಾಡುತ್ತಾರೆ. ಅದನ್ನು ನೋಡಿಕೊಂಡು ಸುಮ್ಮನೆ ಕೂರಬೇಕೆ. ಇವರ ವಿರುದ್ಧ ಧ್ವನಿ ಎತ್ತಿದ್ದರೆ ಸೌದಿ ಅರೇಬಿಯಾದಿಂದ ನಮಗೆ ಬೆದರಿಕೆ ಕರೆಗಳು ಬರುತ್ತವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News