ಪಾಕ್ ಪರ ಘೋಷಣೆ ಕೂಗಿದ ಆರೋಪ: ವಕಾಲತ್ತು ಹಾಕದ ನಿರ್ಣಯ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2020-02-19 17:58 GMT

ಬೆಂಗಳೂರು, ಫೆ.19: ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಪರ ಯಾವುದೇ ವಕೀಲ ವಕಾಲತ್ತು ಹಾಕದಂತೆ ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡಿರುವ ನಿರ್ಣಯ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. 

ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಹುಬ್ಬಳ್ಳಿ ವಕೀಲರ ಸಂಘದ ನಿರ್ಣಯ ಸಂವಿಧಾನದ ವಿಧಿ 21 ಮತ್ತು 22ರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದ್ದು, ಅದನ್ನು ರದ್ದುಪಡಿಸುವಂತೆ ಕೋರಿ ವಕೀಲ ಬಿ.ಟಿ.ವೆಂಕಟೇಶ್ ಸೇರಿ 24 ವಕೀಲರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ. ಪ್ರತಿವಾದಿಗಳನ್ನಾಗಿ ರಾಜ್ಯ ಸರಕಾರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಹುಬ್ಬಳ್ಳಿ ಪೊಲೀಸ್ ಕಮಿಷನರ್, ಹುಬ್ಬಳ್ಳಿ ವಕೀಲರ ಸಂಘ ಹಾಗೂ ರಾಜ್ಯ ವಕೀಲರ ಪರಿಷತ್ತನ್ನು ಸೇರಿಸಲಾಗಿದೆ.

ಅರ್ಜಿಯಲ್ಲಿ, ವಕೀಲರ ಸಂಘ ಆರೋಪಿಗಳಿಗೆ ವಕಾಲತ್ತು ವಹಿಸದಂತೆ ಮಾಡಿರುವ ನಿರ್ಣಯ ರದ್ದುಪಡಿಸುವಂತೆ ರಾಜ್ಯ ವಕೀಲರ ಪರಿಷತ್ತಿಗೆ ನಿರ್ದೇಶಿಸಬೇಕು. ಆರೋಪಿಗಳನ್ನು ಪ್ರತಿನಿಧಿಸಲು ಮುಂದಾಗುವ ವಕೀಲರಿಗೆ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಿಗೆ ನಿರ್ದೇಶಿಸಬೇಕು. ಇನ್ನು ಆರೋಪಿತ ವಿದ್ಯಾರ್ಥಿಗಳನ್ನು ಬಂಧಿಸಿ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿದ ವೇಳೆ ಕೆಲ ವ್ಯಕ್ತಿಗಳು ದಾಳಿ ಮಾಡಿ ಹಲ್ಲೆ ನಡೆಸುವ ಪ್ರಯತ್ನ ಮಾಡಿದ್ದಾರೆ. ಈ ಘಟನೆ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ಹಾಗೆಯೇ ಆರೋಪಿಗಳ ಮೇಲಿನ ಹಲ್ಲೆ ಬಗ್ಗೆ ಎಫ್‌ಐಆರ್ ದಾಖಲಿಸಲು ಕೂಡಲೇ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿರುವ ಅರ್ಜಿದಾರ ವಕೀಲರು, ಪಿಐಎಲ್ ಅನ್ನು ತುರ್ತು ವಿಚಾರಣೆಗೆ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News