ನಿನ್ನ ದಾಖಲೆ ಯಾವಾಗ ನೀಡುತ್ತಿ?

Update: 2020-02-20 05:48 GMT

ಸ್ವಾತಂತ್ರಾನಂತರ ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ಅವಧಿ ಬಿಟ್ಟರೆ,  ದೇಶದಲ್ಲಿ ‘ಆಝಾದಿ’ ಘೋಷಣೆ ಮುನ್ನೆಲೆಗೆ ಬಂದಿರುವುದು ಇತ್ತೀಚೆಗೆ. ಆದರೆ ದಲಿತ ಕವಿ ಸಿದ್ದಲಿಂಗಯ್ಯ ಅವರು 70ರ ದಶಕದಲ್ಲೇ ‘‘ಯಾರಿಗೆ ಬಂತು ಸ್ವಾತಂತ್ರ?’’ ಎಂದು ಪ್ರಶ್ನಿಸಿ ಕವಿತೆಯನ್ನು ಬರೆದಿದ್ದರು. ‘‘ಯಾರಿಗೆ ಬಂತು, ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ?’’ ಎಂದು ಕೇಳುವ ಮೂಲಕ ಈ ದೇಶದ ಬೃಹತ್ ಉದ್ಯಮಿಗಳು, ಪೊಲೀಸರು, ರಾಜಕಾರಣಿಳು, ಪುರೋಹಿತ ಶಾಹಿ ವ್ಯವಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಇದಕ್ಕಾಗಿ ಅವರನ್ನು ಯಾರೂ ಪ್ರಶ್ನಿಸಿರಲಿಲ್ಲ, ಅವರನ್ನು ಜೈಲಿಗೂ ತಳ್ಳಿರಲಿಲ್ಲ. ಈ ಕವಿತೆಯನ್ನು ಇಂದು ಅವರೇನಾದರೂ ಬರೆದಿದ್ದರೆ ಅವರ ಸ್ಥಿತಿ ಏನಾಗಿ ಬಿಡುತ್ತಿತ್ತು?. ‘ದೇಶದ್ರೋಹ’ ಪ್ರಕರಣ ದಾಖಲಿಸಿ ಅವರನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಪ್ರಭುತ್ವ ಜೈಲಿಗೆ ತಳ್ಳಿ ಬಿಡುತ್ತಿತ್ತು. ದುರದೃಷ್ಟವಶಾತ್, ಇಂದು ಸಿದ್ದಲಿಂಗಯ್ಯ ಅವರು ಅಂತಹ ವ್ಯವಸ್ಥೆಯೊಂದಿಗೆ ನೇರವಾಗಿಯೇ ಮೈತ್ರಿ ಮಾಡಿಕೊಂಡು ತಮ್ಮ ಸ್ವಾತಂತ್ರವನ್ನು ಸುಗಮ ಮಾಡಿಕೊಂಡಿದ್ದಾರೆ. ಆದರೆ ಇದೇ ವೇಳೆ, ‘‘ನಿನ್ನ ದಾಖಲೆ ಯಾವಾಗ ತೋರಿಸುತ್ತಿ’’ ಎನ್ನುವ ಕವಿತೆ ಬರೆದು, ಅದನ್ನು ವಾಚಿಸಿದ ಕಾರಣಕ್ಕಾಗಿ ಒಬ್ಬ ಕವಿಯನ್ನು, ಕವಿತೆಯನ್ನು ಪ್ರಕಟಿಸಿದ ಪತ್ರಕರ್ತನನ್ನು ಬಂಧಿಸಲಾಗಿದೆ ಮಾತ್ರವಲ್ಲ, ನ್ಯಾಯಾಲಯದಲ್ಲಿ ಜಾಮೀನು ಸಿಗದೆ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಯಲ್ಲಿ ದ್ದಾರೆ.

ತಮಾಷೆಯೆಂದರೆ ‘‘ನಿನ್ನ ದಾಖಲೆ ಯಾವಾಗ ಕೊಡುತ್ತಿ?’’ ಎಂಬ ಕವಿತೆಯಲ್ಲಿ ಈ ದೇಶಕ್ಕೆ ಸಂಬಂಧಿಸಿದ ಯಾವೊಬ್ಬ ನಾಯಕನ ಹೆಸರೂ ಉಲ್ಲೇಖವಿಲ್ಲ. ಯಾರನ್ನೂ ವೈಯಕ್ತಿಕವಾಗಿ ಟೀಕಿಸಿಲ್ಲ. ಈ ದೇಶವನ್ನು ಮಾರಿದವನ ಬಳಿ, ಬ್ರಿಟಿಷರ ಬೂಟು ನೆಕ್ಕಿದವನ ಬಳಿ, ಆಧಾರ್ ಕಾರ್ಡ್ ನ ಹೆಸರಲ್ಲಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದವನ ಬಳಿ, ಈ ದೇಶದ ಸ್ವಾತಂತ್ರ ಹೋರಾಟಗಾರರನ್ನು ಅವಮಾನಿಸಿದವನ ಬಳಿ ಕವಿ ‘ನಿನ್ನ ದಾಖಲೆ ಕೊಡು’ ಎಂದು ಕೇಳುತ್ತಾನೆ. ಅಷ್ಟು ಕೇಳಿದ್ದೇ, ಕುಂಬಳಕಾಯಿ ಕದ್ದವರಂತೆ ಪೊಲೀಸರು ವರ್ತಿಸಿದ್ದಾರೆ. ಒಂದು ರೀತಿಯಲ್ಲಿ ಈ ದೇಶದ ಪ್ರಧಾನಿಗೆ ಅವಮಾನಿಸಿದವರು ಕವಿತೆ ಬರೆದ ಸಿರಾಜ್ ಬಿಸರಳ್ಳಿಯಲ್ಲ. ಆ ಕವಿತೆ ದೇಶದ ಪ್ರಧಾನಿಯ ಮೇಲೆ ಬರೆದಿರುವುದು ಎಂದು ಅನುಮಾನಿಸಿ ಕವಿಯನ್ನು ಬಂಧಿಸಿದ ಪೊಲೀಸರೇ ಮೋದಿಯವರಿಗೆ ಅವಮಾನಿಸಿದ್ದಾರೆ. ಕವಿ ಮಾಡಿದ ಆರೋಪಗಳನ್ನೆಲ್ಲ ಪೊಲೀಸರು ಮೋದಿಯ ತಲೆಗೆ ಕಟ್ಟಿದಂತಾಗಿದೆ. ‘ಮೋದಿ ಮೋಸಗಾರ’ ಎಂದು ಬೀದಿಯಲ್ಲಿ ಒಬ್ಬ ಚೀರಿದನಂತೆ. ಪೊಲೀಸರು ಬಂಧಿಸಿದರು. ಆಗ ಚೀರಿದ ವ್ಯಕ್ತಿ ‘‘ನಾನು ವಿದೇಶದಲ್ಲಿರುವ ನೀರವ್ ಮೋದಿಯನ್ನು ಹಾಗಂದಿರುವುದು’’ ಎಂದು ಸ್ಪಷ್ಟೀಕರಣ ನೀಡಿದರೂ ಬಿಡದ ಪೊಲೀಸರು, ‘‘ಮೋಸಗಾರ ಯಾರು ಎನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ’’ ಎಂದು ಆತನನ್ನು ಜೈಲಿಗೆ ತಳ್ಳಿದರಂತೆ. ಬೀದರ್‌ನಲ್ಲೂ ಇದೇ ನಡೆದಿರುವುದು.

‘‘ನಿನ್ನ ದಾಖಲೆ ಕೊಡು’’ ಎಂದು ದೇಶವಿರೋಧಿಯೊಬ್ಬನ ಬಳಿ ಕೇಳಿದರೆ ಅದು ತಪ್ಪು ಹೇಗಾಗುತ್ತದೆ? ‘ಪ್ರಧಾನಿ ನರೇಂದ್ರ ಮೋದಿಯವರ ಬಳಿಯೇ ದಾಖಲೆ ಕೇಳಿದ್ದಾನೆ’ ಎಂದು ಪೊಲೀಸರು ಯಾಕೆ ಅರ್ಥ ಹಚ್ಚಬೇಕು? ಒಂದಂತೂ ನಿಜ. ಈ ದೇಶದ ಪ್ರಜೆಯಾಗಿರುವ ಯಾವನೇ ಒಬ್ಬನ ‘ದಾಖಲೆ’ ಕೇಳುವುದು ಆತನ ಅಸ್ಮಿತೆಗೆ ಅವಮಾನಿಸಿದ ಹಾಗೆ. ಆದರೆ ಇಂದು ತನ್ನನ್ನು ಪ್ರಧಾನಿ ಮಾಡಿದ ಜನರ ಬಳಿ, ಮೋದಿಯವರೇ ದಾಖಲೆ ಕೇಳಲು ಮುಂದಾಗಿದ್ದಾರೆ. ಈಗಾಗಲೇ ಇದೇ ಪ್ರಧಾನಿಯ ಬಳಿ ಜನರು ವಿದ್ಯಾರ್ಹತೆಯ ದಾಖಲೆಯೊಂದನ್ನು ಕೇಳಿದ್ದರು. ಅಮಿತ್ ಶಾ ಅವರು ಮೋದಿಯವರ ಪದವಿ ದಾಖಲೆಯೊಂದನ್ನು ತೋರಿಸಿದ್ದಾರಾದರೂ, ಜನರ ಅನುಮಾನ ಇನ್ನೂ ಪರಿಹಾರವಾಗಿಲ್ಲ. ಇಂತಹ ಪ್ರಧಾನಿ, ಈ ದೇಶದ ಕೋಟ್ಯಂತರ ಜನರಲ್ಲಿ ದಾಖಲೆ ಕೇಳಿದ ಕಾರಣದಿಂದ, ಸೂಕ್ತವಾದ ದಾಖಲೆ ಕೊಡಲು ಸಾಧ್ಯವಾಗದ ಸಾವಿರಾರು ಅಮಾಯಕ ದೇಶವಾಸಿಗಳೇ ಡಿಟೆನ್‌ಶನ್ ಸೆಂಟರ್‌ನಲ್ಲಿ ಕೊಳೆಯುತ್ತಿದ್ದಾರೆ. ಪ್ರಧಾನಿ ಜನರ ದಾಖಲೆ ಕೇಳಿದರೆ ಸರಿಯೆಂದಾದರೆ, ಪ್ರಜೆ ಪ್ರಧಾನಿಯ ದಾಖಲೆ ಕೇಳುವುದು ಅಪರಾಧ ಹೇಗಾಗುತ್ತದೆ? ಈ ದೇಶದ ಪ್ರಧಾನಿಯವರು ತಮ್ಮನ್ನು ತಾವು ‘ಚೌಕೀದಾರ್’ ಎಂದು ಕರೆದುಕೊಂಡಿದ್ದಾರೆ. ಒಬ್ಬ ನಿಷ್ಠಾವಂತ ಚೌಕೀದಾರ್ ಮೊದಲು ತನ್ನ ದಾಖಲೆಯನ್ನು ಕೊಟ್ಟು, ಇತರರ ದಾಖಲೆಯನ್ನು ಪರಿಶೀಲಿಸುತ್ತಾನೆೆ. ಆದರೆ ಇಂದು ಯಜಮಾನನ ದಾಖಲೆಯನ್ನು ಕೇಳುತ್ತಿರುವ ಚೌಕೀದಾರ್‌ನನ್ನು ಯಾರೂ ಪ್ರಶ್ನಿಸದಂತಹ, ಆತನ ಬಳಿ ದಾಖಲೆಗಳನ್ನು ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವ ಕಠೋರ ವಾಸ್ತವವನ್ನು ಕವಿ ಸಿರಾಜ್ ಬಿಸರಳ್ಳಿ ಅವರ ಬಂಧನ ದೇಶಕ್ಕೆ ಹೇಳಿದೆ.

ಒಂದು ವೇಳೆ ದೇಶದ ಮೇಲೆ, ಸಮಾಜದ ಮೇಲೆ ಪೊಲೀಸರಿಗೆ ನಿಜವಾದ ಕಾಳಜಿ ಇದ್ದಿದ್ದರೆ ಕಲ್ಲಡ್ಕದಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಎಳೆಯ ಮಕ್ಕಳ ಮೂಲಕ ಪುನರ್‌ಸೃಷ್ಟಿಸಿದ ಆ ಶಾಲೆಯ ಮುಖ್ಯಸ್ಥನನ್ನು ಬಂಧಿಸಬೇಕಾಗಿತ್ತು. ಯಾಕೆಂದರೆ ಅಯೋಧ್ಯೆ ಭೂವಿವಾದದ ತೀರ್ಪು ನೀಡುವ ಸಂದರ್ಭದಲ್ಲೂ ಸುಪ್ರೀಂಕೋರ್ಟ್ ‘‘ಬಾಬರಿ ಮಸೀದಿ ಧ್ವಂಸ ಪ್ರಕರಣ ಭಾರೀ ದೊಡ್ಡ ಅಪರಾಧ’’ ಎಂದು ಹೇಳಿತ್ತು. ಸುಪ್ರೀಂಕೋರ್ಟ್ ಭಾರೀ ಅಪರಾಧವೆಂದು ಗುರುತಿಸಿದ ಘಟನೆಯನ್ನು ಎಳೆ ಮಕ್ಕಳ ಕೈಯಲ್ಲಿ ಪುನರ್ ಅಭಿನಯಿಸುವಂತೆ ಮಾಡುವ ಮೂಲಕ ಶಾಲೆ, ಸುಪ್ರೀಂಕೋರ್ಟ್‌ಗೆ ಮಾತ್ರವಲ್ಲ, ಶಿಕ್ಷಣ ವ್ಯವಸ್ಥೆಗೂ ಅವಮಾನ ಮಾಡಿದೆ. ಮಕ್ಕಳನ್ನು ಅಪರಾಧ ಕೃತ್ಯಗಳಿಗೆ ಪರೋಕ್ಷವಾಗಿ ಈ ಮೂಲಕ ಬಳಸಿಕೊಂಡಿದೆ. ಆದರೆ ಈ ಘಟನೆಗೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ‘ಮಾನವೀಯತೆಯ ದಾಖಲೆ ಕೊಡು’ ಎಂದು ಕೇಳಿದ ಕವಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ದೇಶವನ್ನಾಳುವವರಿಂದ ಕನಿಷ್ಠ ‘ಮಾನವೀಯತೆ’ಯನ್ನು ನಿರೀಕ್ಷಿಸುವುದು ಅಪರಾಧವೇ? ಕವಿ ತನ್ನ ಪದ್ಯದಲ್ಲಿ ಯಾವುದೇ ಸಮಾಜ ಘಾತುಕವಾದ ಕೃತ್ಯಗಳಿಗೆ ಕರೆ ಕೊಟ್ಟಿಲ್ಲ. ದೇಶದೊಳಗೆ ಅನಾಹುತಗಳನ್ನು ಮಾಡುವ ದುಷ್ಕರ್ಮಿಗಳಿಗೆ ‘‘ನಿಮ್ಮ ದಾಖಲೆಗಳನ್ನು ಮೊದಲು ಕೊಡಿ, ಕನಿಷ್ಠ ಮಾನವೀಯತೆ ಇದೆ ಎನ್ನುವ ದಾಖಲೆಗಳನ್ನಾದರೂ ಕೊಡಿ’’ ಎಂದು ಕೇಳಿದ್ದಾನೆ. ಆದರೆ ಅಂತಹ ದಾಖಲೆಗಳೇ ನಮ್ಮ ಬಳಿ ಇಲ್ಲ ಎನ್ನುವಂತೆ, ಪೊಲೀಸರು ಕವಿಯ ಜೊತೆಗೆ ಅಮಾನವೀಯವಾಗಿ ವರ್ತಿಸಿದ್ದಾರೆ.

ಬ್ರಿಟಿಷರ ಕಾಲದಲ್ಲಿ ಅವರ ವಿರುದ್ಧ ಬರೆದ ಲೇಖಕರನ್ನು, ಕವಿಗಳನ್ನು ಬಂಧಿಸಲಾಗುತ್ತಿತ್ತು. ಬೇಂದ್ರೆ ‘ನರಬಲಿ’ ಕವಿತೆಯನ್ನು ಬರೆದಾಗಲೂ ಇದೇ ನಡೆಯಿತು. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲೂ ವ್ಯವಸ್ಥೆ ಕವಿ, ಲೇಖಕರ ಕೈಗಳನ್ನು ಕಟ್ಟಿ ಹಾಕಿತು. ಇದೀಗ ಮತ್ತೆ ಕವಿಗಳನ್ನು, ಲೇಖಕರನ್ನು, ಹೋರಾಟಗಾರರನ್ನು ನಿಷ್ಕಾರುಣ್ಯದಿಂದ ದಮನಿಸಲಾಗುತ್ತಿದೆ. ಅಂದರೆ ಗೋವಿನ ವೇಷದಲ್ಲಿ ತೋಳ ಹಟ್ಟಿಗೆ ನುಗ್ಗಿದೆ. ಪ್ರಜಾಪ್ರಭುತ್ವದ ವೇಷದಲ್ಲೇ ತುರ್ತುಪರಿಸ್ಥಿತಿ ದೇಶದೊಳಗೆ ಕಾಲಿಟ್ಟಿದೆ. ಇಂದು ಸಂಬಂಧಪಟ್ಟವರು ಮಾನವೀಯತೆಯ ದಾಖಲೆ ನೀಡದಿದ್ದರೂ ಪರವಾಗಿಲ್ಲ, ಪ್ರಜಾಸತ್ತಾತ್ಮಕ ವ್ಯವಸ್ಥೆ, ಸಂವಿಧಾನ ಈ ದೇಶದಲ್ಲಿ ಉಳಿದಿದೆ ಎನ್ನುವುದರ ದಾಖಲೆಯನ್ನಾದರೂ ಜನರ ಮುಂದೆ ಒಪ್ಪಿಸುವುದು ಅತ್ಯಗತ್ಯವಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News