ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ

Update: 2020-02-19 18:27 GMT

ದಾವಣಗೆರೆ, ಫೆ.19: ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‍ನ ಪಾಲಿಕೆಯ ಮೂವರು ಸದಸ್ಯರು ಗೈರು ಮತ್ತು ಕಾಂಗ್ರೆಸ್ ಪಾಲಿಕೆ ಸದಸ್ಯರು ಚುನಾವಣೆ ಬಹಿಷ್ಕರಿಸಿದ ಹಿನ್ನಲೆಯಲ್ಲಿ ಬಿಜೆಪಿಯ ಬಿ.ಜೆ.ಅಜಯಕುಮಾರ್ ಮತ್ತು ಉಪ ಮೇಯರ್ ಆಗಿ ಪಕ್ಷೇತರ ಅಭ್ಯರ್ಥಿ ಸೌಮ್ಯ ಎಸ್.ನರೇಂದ್ರಕುಮಾರ್ ಅವಿರೋಧವಾಗಿ ಆಯ್ಕೆಯಾದರು. 

ಚುನಾವಣಾಧಿಕಾರಿಯಾಗಿ ಪ್ರಾದೇಶಿಕ ಆಯುಕ್ತ ವಿ.ಪಿ.ಇಕ್ಕೇರಿಯವರು ಪಾಲ್ಗೊಂಡಿದ್ದು, ಬೆಳಗ್ಗೆ 11.30 ಕ್ಕೆ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಿದರು. ಮೊದಲು ಹಾಜರಾತಿ ಪಡೆದರು. ನಿಗದಿತ ಕೋರಂ ಇರುವ ಪ್ರಯುಕ್ತ ಸಭೆಯನ್ನು ಅಧಿಕೃತವಾಗಿ ಆರಂಭಿಸಿ, ಮೊದಲಿಗೆ ಎಲ್ಲ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. 

ಚುನಾವಣಾ ಸಭೆಯಲ್ಲಿ 42 ಪಾಲಿಕೆ ಸದಸ್ಯರು, 14 ವಿಧಾನ ಪರಿಷತ ಸದಸ್ಯರು, ಓರ್ವ ಸಂಸದ, ಇಬ್ಬರು ಶಾಸಕರು ಸೇರಿದಂತೆ ಒಟ್ಟು 59 ಸದಸ್ಯರು ಚುನಾವಣೆ ಸಭೆಯಲ್ಲಿ ಪಾಲ್ಗೊಂಡು ಹಾಜರಾತಿ ನೀಡಿದ್ದರು. 

ಗೈರಾದ ಸದಸ್ಯರು: 28ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಸದಸ್ಯ ಜೆ.ಎನ್.ಶ್ರೀನಿವಾಸ್, 37ನೇ ವಾರ್ಡಿನ ಶ್ವೇತಾ ಶ್ರೀನಿವಾಸ್ ಮತ್ತು 20ನೇ ವಾರ್ಡಿನ ಯಶೋಧ ಉಮೇಶ್ ಗೈರಾಗಿದ್ದಾರೆ ಎಂದು ತಿಳಿಸಿದರು. 

ಮೇಯರ್ ಸ್ಥಾನಕ್ಕೆ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ 17ನೇ ವಾರ್ಡಿನ ಬಿ.ಜೆ ಅಜಯ್ ಕುಮಾರ್, 22ನೇ ವಾರ್ಡಿನ ಕಾಂಗ್ರೆಸ್ ಪಕ್ಷದಿಂದ ದೇವರಮನಿ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದು, ಅಜಯ್ ಕುಮಾರ್ ಅವರಿಗೆ ಸೂಚಕರಾಗಿ ಪ್ರಸನ್ನಕುಮಾರ್, ಅನುಮೋದಕರಾಗಿ ರಾಕೇಶ್ ಜಾದವ್ ಇದ್ದರು. ದೇವರಮನಿ ಶಿವಕುಮಾರ್ ಅವರಿಗೆ ಸೂಚಕರಾಗಿ ಜಿ.ಎಸ್ ಮಂಜುನಾಥ್, ಚಮನ್‍ಸಾಬ್ ಅನುಮೋದಕರಾಗಿದ್ದರು. 

ನಿಯಮಾನುಸಾರ ಚುನಾವಣೆ ಪ್ರಕ್ರಿಯೆ ಆರಂಭಿಸಿದ ಚುನಾವಣಾಧಿಕಾರಿಗಳು, ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಸದಸ್ಯರ ಪರ ಮತ ಚಲಾಯಿಸುವಂತೆ ತಿಳಿಸಿದಾಗ ಒಟ್ಟು 31 ಸದಸ್ಯರು ಅಜಯಕುಮಾರ್ ಪರವಾಗಿ ಮತ ಚಲಾಯಿಸಿದರು.

ಕಾಂಗ್ರೆಸ್ ಪಕ್ಷದ ಮೇಯರ್ ಅಭ್ಯರ್ಥಿ ದೇವರಮನಿ ಶಿವಕುಮಾರ್ ಪರ ಮತ ಚಲಾಯಿಸಲು ಚುನಾವಣಾಧಿಕಾರಿಗಳು ತಿಳಿಸಿದಾಗ ಕಾಂಗ್ರೆಸ್ ಸದಸ್ಯರು ಇಲ್ಲದ ಕಾರಣ ಯಾವುದೇ ಮತ ಬೀಳಲಿಲ್ಲ. ವಿರುದ್ದ ಮತ ಚಲಾಯಿಸಲು ಸೂಚಿಸಿದಾಗ ಈ ಸದಸ್ಯರ ವಿರುದ್ದ 31 ಬಿಜೆಪಿ ಸದಸ್ಯರು ಕೈ ಎತ್ತಿ, ಸಹಿ ಹಾಕಿದರು. ಅತಿ ಹೆಚ್ಚು ಮತ ಗಳಿಸಿದ ಬಿಜೆಪಿ ಅಭ್ಯರ್ಥಿ ಅಜಯಕುಮಾರ್ ವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ಘೋಷಿಸಿದರು. 

ಒಟ್ಟು 59 ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸದಸ್ಯರು ಅಕ್ರಮ ಮತದಾರರು ಚುನಾವಣೆಯಲ್ಲಿ ಪಾಲ್ಗೊಂಡಿದ್ದಾರೆಂದು ಚುನಾವಣೆ ಬಹಿಷ್ಕರಿಸಿ ಹೊರ ನಡೆದಿದ್ದರಿಂದ ಬಿಜೆಪಿಗೆ ಗೆಲುವು ಅನಾಯಾಸವಾಗಿ ಲಭಿಸಿತು.
ಉಪಮೇಯರ್ ಸ್ಥಾನಕ್ಕೆ ಪಕ್ಷೇತರ ಸದಸ್ಯೆ ಸೌಮ್ಯ ಎಸ್.ನರೇಂದ್ರ ಕುಮಾರ್, ಕಾಂಗ್ರೆಸ್ ಪಕ್ಷದ ಆಶಾ ಡಿ.ಎಸ್. ಹಾಗೂ ಜೆಡಿಎಸ್‍ನ ನೂರ್ ಜಹಾನ್.ಬಿ ನಾಮಪತ್ರ ಸಲ್ಲಿಸಿದ್ದರು. ಸೌಮ್ಯ ನರೇಂದ್ರ ಕುಮಾರ್ ಅವರಿಗೆ ಸೂಚಕರಾಗಿ ಯಶೋಧಮ್ಮ ಬಿ.ಎ, ಅನುಮೋದಕರಾಗಿ ಗೌರಮ್ಮ, ಆಶಾ ಡಿ.ಎಸ್ ಇವರಿಗೆ ಸೂಚಕರಾಗಿ ಸೈಯದ್ ಚಾರ್ಲಿ, ಅನುಮೋದಕರಾಗಿ ಸುಧಾ, 2 ನೇ ನಾಮಪತ್ರ  ಸೂಚಕರಾಗಿ ಎ.ಬಿ ರಹೀಮ್, ಅನುಮೋದಕರಾಗಿ ನಾಗರಾಜ ಹಾಗೂ ನೂರ್ ಜಹಾನ್ ಬಿ. ಇವರ ನಾಮಪತ್ರಕ್ಕೆ ಸೂಚಕರಾಗಿ ಶೀವಲೀಲಾ, ಅನುಮೋದಕರಾಗಿ ವಿನಾಯಕ ಬಿ.ಎಚ್. ಇದ್ದರು.

ಪಕ್ಷೇತರ ಸದಸ್ಯೆ ಸೌಮ್ಯ ಎಸ್. ನರೇಂದ್ರ ಕುಮಾರ್ ಪರ 31 ಮತ ಬಂದಿದ್ದು ಅತಿ ಹೆಚ್ಚು ಮತ ಪಡೆದ ಸೌಮ್ಯ ಎಸ್.ನರೇಂದ್ರ ಕುಮಾರ್ ರವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ಘೋಷಿಸಿದರು.   

ಸ್ಥಾಯಿ ಸಮಿತಿಗಳ ಚುನಾವಣೆ: ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಂತರ ಚುನಾವಣಾಧಿಕಾರಿಗಳು ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ನಿಯಮಾನುಸಾರ ನಾಮಪತ್ರಗಳ ಪರಿಶೀಲನೆ, ಚುನಾವಣೆ ಮತ್ತು ಫಲಿತಾಂಶ ಪ್ರಕಟಿಸಿದರು.

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಸಮಿತಿಗಳಿಗೆ ತಲಾ ಏಳು ಸದಸ್ಯರು ಆಯ್ಕೆಯಾದರು. 

ಸಭೆಯಲ್ಲಿ ಸಹಾಯಕ ಪ್ರಾದೇಶಿಕ ಆಯುಕ್ತರಾದ ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಇತರೆ ಅಧಿಕಾರಿಗಳು ಹಾಜರಿದ್ದರು. 

ಬಿಜೆಪಿಯ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ರವೀಂದ್ರನಾಥ್, ವೈ.ಎ. ನಾರಾಯಣಸ್ವಾಮಿ, ರವಿಕುಮಾರ್ ಸೇರಿದಂತೆ ಇತರರು ಇದ್ದರು. 

ಅಭಿವೃದ್ದಿ ಕೆಲಸಗಳಿಗೆ ಅದ್ಯತೆ
ಪಾಲಿಕೆ ನೂತನ ಮೇಯರ್ ಅಜಯಕುಮಾರ್ ಮಾತನಾಡಿ, ನಗರದ ಅಭಿವೃದ್ಧಿ ಕುರಿತು ಒಳ್ಳೆಯ ಆಲೋಚನೆಗಳನ್ನು ಹೊಂದಿದ್ದೇನೆ. ನಗರದ ಜನತೆಯಲ್ಲಿ ಬೇಡಿಕೆಯೇನೆಂದರೆ ಒಂದು ವರ್ಷದ ನನ್ನ ಮೇಯರ್ ಅವಧಿಯಲ್ಲಿ ಅಭಿನಂದನೆ ಕಾರ್ಯಗಳಿಗೆ ಕರೆಯಬೇಡಿ. ಬದಲಾಗಿ ಅಭಿವೃದ್ಧಿ ಕೆಲಸ ಮಾಡಲು ನನ್ನನ್ನು ಸದಾ ಆಹ್ವಾನಿಸಿ. ನಗರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಗುರಿ ಹೊಂದಿದ್ದು, ಪಕ್ಷದ ಹಿರಿಯರ ಮಾರ್ಗದಲ್ಲಿ ನಾನು ನಡೆಯುತ್ತೇನೆ. ನನ್ನ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಸಂಪೂರ್ಣ ಅನುಷ್ಟಾನಗೊಳಿಸುವ ಗುರಿ ಹೊಂದಿದ್ದೇನೆ ಎಂದರು.

ನಾಲ್ಕು ಪಕ್ಷೇತರ ಅಭ್ಯರ್ಥಿಗಳು ನಮಗೆ ಬೆಂಬಲ ನೀಡಿದ್ದಾರೆ. ವಿರೋಧ ಪಕ್ಷದವರು ಚುನಾವಣೆಗೆ ಬಂದು ಬಹಿಷ್ಕರಿಸಿ ಹೊರನಡೆದರೂ, ನಿಯಮಾನುಸಾರ ಚುನಾವಣಾಧಿಕಾರಿಗಳು ಚುನಾವಣೆ ನಡೆಸಿದ್ದಾರೆ. ಗೆಲುವು ನಮ್ಮದಾಗಿದೆ. ಉತ್ತಮ ಕೆಲಸ ಮಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News