ಮುಂಬೈ ದಾಳಿ 'ಹಿಂದೂ ಉಗ್ರ ಕೃತ್ಯ' ಎಂದು ಬಿಂಬಿಸಲು ಯೋಜನೆ ನಡೆದಿತ್ತೆಂದು ಮಾಜಿ ಪೊಲೀಸ್ ಆಯುಕ್ತರು ಹೇಳಿಲ್ಲ

Update: 2020-02-20 11:11 GMT

ಮುಂಬೈ: ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ 26/11ರ ಮುಂಬೈ ದಾಳಿಯನ್ನು 'ಹಿಂದು ಉಗ್ರ ಕೃತ್ಯ'ವೆಂದು ಬಿಂಬಿಸಲು ಯೋಜನೆ ಹಾಕಿತ್ತು ಎಂದು ಮುಂಬೈಯ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ತಮ್ಮ ಆತ್ಮಕಥನದಲ್ಲಿ ಎಲ್ಲೂ ಬರೆದಿಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆಂದು ವಿಶೇಷ ಅಭಿಯೋಜಕ ಉಜ್ವಲ್ ನಿಕಮ್ ಹೇಳಿದ್ದಾರೆ.

ರಾಕೇಶ್ ಮರಿಯಾ ಅವರ ಆತ್ಮಕಥನದಲ್ಲಿ 26/11 ದಾಳಿಗೆ ಸಂಬಂಧಿಸಿ ಗಲ್ಲು ಶಿಕ್ಷೆಗೊಳಗಾದ ಉಗ್ರ ಅಜ್ಮಲ್ ಕಸಬ್ ಕುರಿತಾದ ಉಲ್ಲೇಖಗಳನ್ನು ತಪ್ಪಾಗಿ ವ್ಯಾಖ್ಯಾನಿಸಿರುವ ಹಿಂದೆ ಉಂಟಾದ ಭಾರೀ ವಿವಾದದ ಹಿನ್ನೆಲೆಯಲ್ಲಿ ಕಸಬ್‍ ಗೆ ಶಿಕ್ಷೆ ಖಾಯಂಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಜ್ವಲ್ ನಿಕಮ್ ಮೇಲಿನಂತೆ ಹೇಳಿದ್ದಾರೆ.

ಮುಂಬೈ ದಾಳಿ ನಡೆಸಿದ ಉಗ್ರರಿಂದ ವಶಪಡಿಸಿಕೊಳ್ಳಲಾದ ಗುರುತುಪತ್ರಗಳ ಹಿಂದೆ  ಈ ದಾಳಿಯನ್ನು ಹಿಂದು ಉಗ್ರ ಕೃತ್ಯ ಎಂದು ಬಿಂಬಿಸುವ ಸಂಚಿತ್ತು ಎಂಬುದನ್ನು ಎಲ್ಲಿಯೂ ಹೇಳಿಲ್ಲ. ಮಾಧ್ಯಮ ಅದನ್ನು ಹಾಗೆ ವರದಿ ಮಾಡುವ ಸಾಧ್ಯತೆಯಿತ್ತು ಎಂದು ರಾಕೇಶ್ ಮರಿಯಾ ಹೇಳಲು ಯತ್ನಿಸಿದ್ದರು ಎಂದು ನಿಕಮ್ ಹೇಳಿದ್ದಾರೆ.

"ಉಗ್ರ ಸಂಘಟನೆ ಎಲ್‍ಇಟಿ ತನ್ನ ಯೋಜನೆಯಲ್ಲಿ ಸಫಲವಾಗಿದ್ದೇ ಆದಲ್ಲಿ ಅಜ್ಮಲ್ ಕಸಬ್ ಬೆಂಗಳೂರು ನಿವಾಸಿ, ತನ್ನ  ಮಣಿಕಟ್ಟಿನಲ್ಲಿ ಕೆಂಪುದಾರ ಕಟ್ಟಿದ ಸಮೀರ್ ದಿನೇಶ್ ಚೌಧರಿ ಆಗಿ ಸಾಯುತ್ತಿದ್ದ'' ಎಂದು ತಮ್ಮ ಆತ್ಮಕಥನ `ಲೆಟ್ ಮಿ ಸೇ ಇಟ್ ನೌ' ಇದರಲ್ಲಿ ರಾಕೇಶ್ ಹೇಳಿದ್ದರು. "ಆಗ ಹಿಂದು ಉಗ್ರರು ಮುಂಬೈ ದಾಳಿ ನಡೆಸಿದ್ದರು ಎಂದು ಚೀರುವ ಶೀರ್ಷಿಕೆಗಳು ದಿನಪತ್ರಿಕೆಗಳಲ್ಲಿ ಬರುತ್ತಿದ್ದವು. ಅಷ್ಟೇ ಅಲ್ಲದೆ ಬೆಂಗಳೂರಿಗೆ ಧಾವಿಸಿ ಆತನ ಕುಟುಂಬ ಹಾಗೂ ನೆರೆಹೊರೆಯವರನ್ನು ಸಂದರ್ಶಿಸಲು ಟಿವಿ ಪತ್ರಕರ್ತರು ಧಾವಿಸುತ್ತಿದ್ದರು. ಆದರೆ ಅದು ಹಾಗಾಗದೆ ಪಾಕಿಸ್ತಾನದ ಫರೀದ್‍ ಕೋಟ್‍ ನ ಅಜ್ಮಲ್ ಅಮೀರ್ ಕಸಬ್ ಆಗಿಯೇ ಆತ ಉಳಿದ'' ಎಂದು ರಾಕೇಶ್ ಮರಿಯಾ ಬರೆದಿದ್ದರು.

ಕಸಬ್ ಹಾಗೂ ಅದಾಗಲೇ ಸತ್ತಿದ್ದ ಉಗ್ರರಿಂದ ಗುರುತುಪತ್ರಗಳನ್ನು ಹೇಗೆ ಪತ್ತೆ ಹಚ್ಚಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ನಿಕಮ್, "ಪೊಲೀಸರು ಬಹಳಷ್ಟು ಶೋಧ ಕಾರ್ಯಾಚರಣೆ ನಡೆಸಿದರು ಹಾಗೂ ಗುರುತು ಪತ್ರಗಳನ್ನು ಹೈದರಾಬಾದ್‍ ನ ಕಾಲೇಜ್ ನೀಡಿತ್ತೇ ಇಲ್ಲವೇ ಎಂದು ಕಂಡು ಹಿಡಿದರು. ಇದೇ ಕಾರಣದಿಂದ ಆ ಕಾಲೇಜಿನ ಪ್ರಾಂಶುಪಾಲರನ್ನು ಸಾಕ್ಷಿಯಾಗಿ ಪರಿಗಣಿಸಿ ಅವರ ಹೇಳಿಕೆ ದಾಖಲಿಸಿಕೊಂಡೆ. ಈ ಜನರು ನಕಲಿ ಗುರುತು ಕಾರ್ಡ್ ಪಡೆದುಕೊಂಡು ದಾಳಿ ನಡೆಸುವ ಮುನ್ನವೇ ಸೆರೆ ಸಿಕ್ಕರೆ  ತಾವು ಭಾರತೀಯ ನಾಗರಿಕರೆಂದು ಹೇಳಿಕೊಳ್ಳಬಹುದೆಂಬುದು ಅವರ ಉದ್ದೇಶವಾಗಿದ್ದಿರಬಹುದು'' ಎಂದು ನಿಕಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News