ಕನ್ನಡದ ಮೇಲೆ ಅನ್ಯ ಭಾಷಿಗರ ದಬ್ಬಾಳಿಕೆಯಾಗುತ್ತಿದೆ: ಡಾ.ಎಚ್.ಎಸ್.ಮುದ್ದೇಗೌಡ ಆತಂಕ

Update: 2020-02-20 11:17 GMT

ಮಂಡ್ಯ, ಫೆ.20: ಕನ್ನಡ ಭಾಷೆ ಮೇಲೆ ಅನ್ಯ ಭಾಷಿಗರ ದಬ್ಬಾಳಿಕೆಯಾಗುತ್ತಿದೆ. ಬೆಂಗಳೂರೊಂದರಲ್ಲೇ ಜಗತ್ತಿನ 37 ಭಾಷೆಗಳನ್ನು ಮಾತನಾಡುವವರಿದ್ದಾರೆ. ಹೆಸರಿಗಷ್ಟೇ 6.5 ಕೋಟಿ ಕನ್ನಡಿಗರು ಎಂದು ಹೇಳಲಾಗುತ್ತಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ವಿಷಾದಿಸಿದ್ದಾರೆ.

ವಿಶ್ವ ಕನ್ನಡ ವೇದಿಕೆ ವತಿಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಶತಮಾನೋತ್ಸವ ಸಭಾಂಗಣದಲ್ಲಿ ಚದುರಿದ ತಾರೆಗಳ ಸಮ್ಮಿಲನ ಶೀರ್ಷಿಕೆಯಡಿ ಆಯೋಜಿಸಿದ್ದ ಕನ್ನಡ ಶಾಲೆಗಳಲ್ಲಿ ಓದಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಸಾಯುವ ಭಾಷೆಗಳಲ್ಲಿ ಕನ್ನಡ ಭಾಷೆ 40ನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಆದರೆ, 2,500 ವರ್ಷಗಳ ಇತಿಹಾಸವಿರುವ ಇದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಬೇರುಗಳು ಆಳವಾಗಿ ಬೇರೂರಿವೆ. ಇವುಗಳನ್ನು ಪೋಷಿಸಿ, ಉಳಿಸಿ ಬೆಳೆಸುವ ಕೆಲಸ ಯುವ ಜನಾಂಗದಿಂದ ಆಗಬೇಕು. ಒಂದು ಭಾಷೆ ಬೆಳೆಯಬೇಕಾದರೆ ಅದನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು. 

ಪೋಷಕರು ತಮ್ಮ ಮಗುವನ್ನು ಇಂಗ್ಲಿಷ್ ಕಾನ್ವೆಂಟ್‍ನಲ್ಲೇ ವ್ಯಾಸಂಗ ಮಾಡಿಸಬೇಕು ಎಂದು ಹಠಕ್ಕೆ ಬಿದ್ದವರಂತೆ ಸೇರಿಸುತ್ತಿದ್ದಾರೆ. ಎಲ್ಲ ಭಾಷೆಗಳನ್ನು ಕಲಿಯೋಣ, ಆದರೆ, ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಕನ್ನಡ ಶಾಲೆಗಳ ಉಳಿಸಬೇಕು ಎಂದು ಅವರು ಸಲಹೆ ನೀಡಿದರು.

ವ್ಯಕ್ತಿತ್ವ ವಿಕಸನ ತರಬೇತುದಾರ ಚೇತನ್‍ರಾಮ್ ಮಾತನಾಡಿ, ಪ್ರಪಂಚದಲ್ಲಿರುವ ಎಲ್ಲಾ ಭಾಷೆಗಳಿಗಿಂದ ಸ್ಪಷ್ಟತೆ ನೀಡುವ ಭಾಷೆ ಯಾವುದಾದರೂ ಇದ್ದರೆ ಅದು ಕನ್ನಡ ಭಾಷೆ. ಇಂಗ್ಲಿಷ್ ಭಾಷೆ ಸಾಯಬಹುದು. ಆದರೆ, ಕನ್ನಡ ಭಾಷೆ ಸಾಯಲು ಸಾಧ್ಯವಿಲ್ಲ ಎಂದರು.

ಕನ್ನಡ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಹೆದ್ದೆಗಳಲ್ಲಿರುವ ಎಚ್.ಎಂ.ಲೋಕೇಶ್, ಡಾ.ಡಿ.ಅನಂತು, ಡಿ.ಇ.ನಿಂಗರಾಜು, ವರಲಕ್ಷ್ಮಿ, ಎಚ್.ಎನ್.ಮಮತಾ ಹಾಗೂ ಕೆ.ಎಂ.ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.

ದಕ್ಷಿಣ ಶಿರಡಿ ಪೀಠಾಧ್ಯಕ್ಷ ಡಾ.ಸಾಯಿ ದತ್ತ ರಘುನಾಥ ಗೂರೂಜಿ ಸಾನಿಧ್ಯ ವಹಿಸಿದ್ದರು. ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ದೊಡ್ಡಚಾರ್, ಜೆಡಿಎಸ್ ಮುಖಂಡ ಕೆ.ರಾಧಕೃಷ್ಣ, ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್, ವಿಶ್ವ ಕನ್ನಡ ವೇದಿಕೆ ರಾಜ್ಯಾಧ್ಯಕ್ಷ ಎಚ್.ಎಸ್.ವಿಜಯಕುಮಾರ್‍ಗೌಡ, ಕಾನೂನು ಘಟಕದ ರಾಜ್ಯಾಧ್ಯಕ್ಷ ಎಸ್.ಎಂ.ಶಿವಲಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಎನ್.ನಟರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News