"ನೀವು ನನಗೆ ಡಿಕ್ಟೇಟ್ ಮಾಡ್ತೀರಾ?" : ರಾಮಲಿಂಗಾರೆಡ್ಡಿ-ಸ್ಪೀಕರ್ ಕಾಗೇರಿ ವಾಗ್ವಾದ

Update: 2020-02-20 11:56 GMT

ಬೆಂಗಳೂರು, ಫೆ. 20: ಸದನದಲ್ಲಿ ಮಾತನಾಡಲು ಅವಕಾಶ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ರಾಮಲಿಂಗಾರೆಡ್ಡಿ ನಡುವೆ ಏರಿದ ಧ್ವನಿಯಲ್ಲಿ ಕೆಲಕಾಲ ವಾಗ್ವಾದ ನಡೆಯಿತು.
ಗುರುವಾರ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಲು ಹಿರಿಯ ಸದಸ್ಯನಾದ ನನಗೆ ಅವಕಾಶ ಕೊಡಿ ಎಂದು ರಾಮಲಿಂಗಾರೆಡ್ಡಿ ಕೋರಿದರು. ಆದರೆ, ಜೆಡಿಎಸ್ ಸದಸ್ಯ ಎಂ.ಬಿ.ವೀರಭದ್ರಯ್ಯ ಅವರಿಗೆ ಮಾತನಾಡಲು ಸೂಚಿಸಿದರು. ಹಿರಿಯ ಸದಸ್ಯರಿಗೆ ಮೊದಲು ಅವಕಾಶ ನೀಡಬೇಕೆಂದು ರೆಡ್ಡಿ ಮನವಿ ಮಾಡಿದರು.

ಈ ವೇಳೆ ಎದ್ದುನಿಂತು ರಾಮಲಿಂಗಾರೆಡ್ಡಿ ಮಾತನಾಡಲು ಮುಂದಾದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೇರಿ, ಹಿರಿಯ ಸದಸ್ಯರಾಗಿ ನೀವೇ ಶಿಸ್ತು ಮೀರಿದರೆ ಹೇಗೆ? ಎಂದು ಪ್ರಶ್ನಿಸಿದರು. ‘ಸದನ ನಡೆಸಲು ಶಿಸ್ತು ಇರಬೇಕು. ಯಾರನ್ನು ಕರೆಯುತ್ತೇನೋ ಅವರು ಮಾತನಾಡಲಿ’ ಎಂದರು.
ಇದರಿಂದ ಕೆರಳಿದ ರಾಮಲಿಂಗಾರೆಡ್ಡಿ, ನಿಮಗೆ ಮನಸ್ಸಿಗೆ ಬಂದ ಹಾಗೆ ಅವಕಾಶ ಕೊಡಲು ಸಾಧ್ಯಾನಾ? ಎಂದರು. ‘ಅವಕಾಶ ಕೊಡುವುದು, ಬಿಡುವುದು ನನಗೆ ಬಿಟ್ಟಿದ್ದು, ನಾನು ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ನಿಯಮಾವಳಿಗಳ ಪ್ರಕಾರ ಮುಂದುವರಿಯಬೇಕಾಗುತ್ತದೆ’ ಎಂದು ಕಾಗೇರಿ ಎಚ್ಚರಿಕೆ ನೀಡಿದರು.

ನಾನು ನಿಮಗಿಂತ ಹಿರಿಯ ಸದಸ್ಯನಿದ್ದೇನೆ. ನೀವು ನನಗೆ ಡಿಕ್ಟೇಟ್ ಮಾಡ್ತೀರಾ? ನಿಮಗೆ ಮನಸ್ಸಿಗೆ ಬಂದ ಹಾಗೆ ಮಾಡಲು ಸಾಧ್ಯವಿಲ್ಲ, ನನಗೆ ಶಿಸ್ತಿನ ಪಾಠ ಹೇಳಿ ಕೊಡಲು ಬರಬೇಡಿ, ಇದು ಚೆನ್ನಾಗಿರುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಏರುಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಇದರಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರು, ಸ್ಪೀಕರ್ ಅವರಿಗೆ ಕೈ ತೋರಿಸಿ ಮಾತನಾಡುವುದು ಸಲ್ಲ. ರಾಮಲಿಂಗಾರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ರಾಮಲಿಂಗಾರೆಡ್ಡಿ ಅವರ ಆಸನದ ಬಳಿಗೆ ಧಾವಿಸಿದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ರೆಡ್ಡಿ ಅವರನ್ನು ಸಮಾಧಾನಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News