"ಮುಂದಿನ ಸಾಲಿನಲ್ಲಿ ಕುಳಿತವರು ತ್ಯಾಗ ಮಾಡಬೇಕು"

Update: 2020-02-20 14:05 GMT

ಬೆಂಗಳೂರು, ಫೆ. 20: ‘ಸದನದ ಮುಂದಿನ ಸಾಲಿನಲ್ಲಿ ಕುಳಿತಿರುವವರು ತ್ಯಾಗ ಮಾಡಿದರೆ ನಮಗೂ ಮಾತನಾಡಲು ಅವಕಾಶ ಸಿಗುತ್ತದೆ’ ಎಂದು ಬಿಜೆಪಿ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಸದನದಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವ ಚರ್ಚೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತಿದ್ದ ವೇಳೆ ಮಧ್ಯಪ್ರವೇಶಿಸಿದ ಯತ್ನಾಳ್, ‘ಸದನದಲ್ಲಿ ನಮಗೂ ಮಾತನಾಡಲು ಅವಕಾಶ ಕೊಡಿ’ ಎಂದು ಕೋರಿದರು.

‘ಮುಂದಿನ ಸಾಲಿನಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ನಮ್ಮ ಪಕ್ಷದ ಮುಖಂಡರು ಸ್ವಲ್ಪ ತ್ಯಾಗ ಮಾಡಬೇಕು. ನಮಗೂ ನಮ್ಮ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡಬೇಕು’ ಎಂದು ಯತ್ನಾಳ್ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸದನದಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಂಡಿರುವ ಸಚಿವರು ತ್ಯಾಗ ಮಾಡಿ ನಮಗೆ ಅವಕಾಶ ಕೊಡಿ ಎಂದು ನಿಮ್ಮ ಪಕ್ಷದ ಮುಖಂಡರನ್ನು ನೀವು ಕೇಳಬೇಕು. ಯತ್ನಾಳ್, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು’ ಎಂದು ಕಾಲೆಳೆದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ಅಮರೇಗೌಡ ಬೈಯಾಪುರ, ‘ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದನದ ಮುಂದಿನ ಸಾಲಿಗೆ ಬರಲು ಪ್ರಯತ್ನ ನಡೆಸಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವರು ಸಚಿವ ಸ್ಥಾನ ತ್ಯಾಗ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆಂದು ಕಿಚಾಯಿಸಿದರು.

‘ಎಲ್ಲ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಸಮಯಾವಕಾಶ ಕಡಿಮೆ ಇದೆ. ಹೀಗಾಗಿ ಎಲ್ಲ ಸದಸ್ಯರು ಮಾತನಾಡಲು ಅವಕಾಶ ನೀಡಬೇಕಿದೆ. ಆ ನಿಟ್ಟಿನಲ್ಲಿ ಸದನದ ಚರ್ಚಾ ಅವಧಿಯನ್ನು ಹೆಚ್ಚಿಸಬೇಕು ಎಂದು ಸ್ಪೀಕರ್ ಕಾಗೇರಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News