ಫೆ.25ರ ವರೆಗೆ ಅಧಿವೇಶನ ವಿಸ್ತರಿಸಲು ವಿಪಕ್ಷಗಳ ಒತ್ತಾಯ

Update: 2020-02-20 13:34 GMT

ಬೆಂಗಳೂರು, ಫೆ. 20: ವಿಧಾನಸಭೆ ಅಧಿವೇಶನವನ್ನು ಫೆ.25ರವರೆಗೂ ವಿಸ್ತರಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದ ಘಟನೆ ನಡೆಯಿತು.

ಗುರುವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ‘ಕಾಲಾವಕಾಶ ಕಡಿಮೆ ಇರುವುದರಿಂದ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವದ ಚರ್ಚೆ ಮುಗಿಸಿ, ಸರಕಾರ ಇಂದು ಉತ್ತರ ನೀಡಲಿದೆ’ ಎಂದು ಸ್ಪೀಕರ್ ಕಾಗೇರಿ ಪ್ರಕಟಿಸಿದರು.

ಈ ವೇಳೆ ಜೆಡಿಎಸ್ ಸದಸ್ಯ ವೆಂಕಟರಾವ್ ನಾಡಗೌಡ, ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಮಾ.2ಕ್ಕೆ ಸರಕಾರ ಉತ್ತರಿಸಲಿ. ಇಂದೇ ಉತ್ತರ ನೀಡಿದರೆ ಸದಸ್ಯರಿಗೆ ಚರ್ಚೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಎಲ್ಲ ಸದಸ್ಯರಿಗೆ ಮಾತನಾಡಲು ಸಮಯ ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಿದ್ದರಾಮಯ್ಯ, ಕಾನೂನು ಸಚಿವ ಮಾಧುಸ್ವಾಮಿ ರಾಜ್ಯಪಾಲರ ಭಾಷಣದ ಚರ್ಚೆಗೆ ಕಾಲಮಿತಿ ಹಾಕಿ ಎಂದಿದ್ದಾರೆ. ರಾಜ್ಯಪಾಲರ ಭಾಷಣ ಸರಕಾರದ ಮುನ್ನೋಟವಾಗಿದ್ದು, ಅದರ ಮೇಲೆ ಚರ್ಚೆ ನಡೆಸಲು ವಿಫುಲ ಅವಕಾಶ ಇರಬೇಕು.

ಇಂದು ಎಲ್ಲ ಸದಸ್ಯರು ಚರ್ಚೆ ನಡೆಸಲಿ. ಜಂಟಿ ಅಧಿವೇಶನದಲ್ಲೇ ಉತ್ತರ ನೀಡಬೇಕೆಂದೇನಿಲ್ಲ. ಬಜೆಟ್ ಅಧಿವೇಶನದಲ್ಲಿ ಉತ್ತರ ನೀಡಬಹುದು. ಕೇವಲ ನಾಲ್ಕು ದಿನ ಅಧಿವೇಶನ ಕರೆದಿದ್ದು, ಚರ್ಚೆಗೆ ಅವಕಾಶ ನೀಡದಿದ್ದರೆ ಸದಸ್ಯರ ಹಕ್ಕು ಮೊಟಕುಗೊಳಿಸಿದಂತೆ ಆಗುತ್ತದೆ. ಆದುದರಿಂದ ಫೆ.25ರ ವರೆಗೆ ಅಧಿವೇಶನ ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಮಾ.2ರಿಂದ 4ರ ವರೆಗೆ ಸಂವಿಧಾನ ಕುರಿತ ಚರ್ಚೆ ಇದೆ. ಹೀಗಾಗಿಯೇ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಚರ್ಚೆಗೆ ಸೀಮಿತಗೊಳಿಸಲಾಗಿದೆ. ಹಿಂದೆಂದೂ ಪೂರ್ವ ನಿಗದಿಯಂತೆ ಅಧಿವೇಶನ ನಡೆದಿಲ್ಲ. ಮಾ.5ಕ್ಕೆ ಬಜೆಟ್ ಮಂಡನೆಯಾಗಲಿದೆ ಎಂದರು.

ಈ ಬಗ್ಗೆ ಆಡಳಿತ ಮತ್ತು ವಿಪಕ್ಷ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಅಧಿವೇಶನ ವಿಸ್ತರಣೆ ಅಥವಾ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಉತ್ತರ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ಕಾಗೇರಿ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News