ಬಿಎಸ್‌ವೈ ಸರಕಾರ ‘ಆಪರೇಷನ್ ಕಮಲದ ಅನೈತಿಕ ಕೂಸು’: ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ

Update: 2020-02-20 13:44 GMT

ಬೆಂಗಳೂರು, ಫೆ. 20: ‘ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಆಪರೇಷನ್ ಕಮಲ ಎಂಬ ಅನೈತಿಕ ಕಸರತ್ತಿನ ಕೂಸಾಗಿ ಅಸ್ತಿತ್ವಕ್ಕೆ ಬಂದಿದೆ. ಈ ಸರಕಾರಕ್ಕೆ ಜನರ ಆಶೀರ್ವಾದ ಇಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಮಂದಿ ಶಾಸಕರ ರಾಜೀನಾಮೆ ಕೊಡಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಇವರಿಗೆ ಜನಾದೇಶವಿಲ್ಲ ಎಂದು ಟೀಕಿಸಿದರು.

ನಿಮ್ಮ ಸಾಧನೆ ಏನು?: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಆರೇಳು ತಿಂಗಳು ಕಳೆದರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ ರೂ.ಜತೆಗೆ ರಾಜ್ಯದಿಂದ 4 ಸಾವಿರ ರೂ.ನೀಡುವುದನ್ನು ಬಿಟ್ಟರೆ ಹೇಳಿಕೊಳ್ಳಲು ಒಂದೇ ಒಂದು ಯೋಜನೆಯೂ ಇಲ್ಲ.

ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಬಹುತೇಕ ಯೋಜನೆಗಳು 2013ರಿಂದ 2018ರ ವರೆಗಿನ ನಮ್ಮ ಸರಕಾರ ಜಾರಿಗೆ ತಂದಿರುವ ಯೋಜನೆಗಳು ಎಂದ ಅವರು, ರೈತರ ಸಾಲಮನ್ನಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಾಧನೆ. ನಿಮ್ಮ ಸಾಧನೆ ಏನು ಎಂದು ಹೇಳಬೇಕಲ್ಲವೇ? ಎಂದು ವಾಗ್ದಾಳಿ ನಡೆಸಿದರು.

ಅರಣ್ಯ ಪ್ರದೇಶ ಹೆಚ್ಚಿಸಿದ ದೇಶದ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಮೊದಲನೆ ಸ್ಥಾನದಲ್ಲಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಯಾವುದೇ ಅರಣ್ಯ ರಾತ್ರಿ-ಹಗಲಾಗುವುದರೊಳಗೆ ಇಲ್ಲವೆ ಒಂದೆರಡು ವರ್ಷಗಳಲ್ಲಿ ಬೆಳೆಯುವುದಿಲ್ಲ. ಬಹಳ ವರ್ಷಗಳ ಪ್ರಯತ್ನದಿಂದ ಮಾತ್ರ ಅದು ಸಾಧ್ಯ. 2013ರಿಂದ 2018ನೆ ಸಾಲಿನ ಅವಧಿಯಲ್ಲಿ ಅರಣ್ಯ ಪ್ರದೇಶಗಳಲ್ಲಿ 27.32 ಕೋಟಿ ಸಸಿಗಳನ್ನು ನಾವು ನೆಟ್ಟಿದ್ದೆವು. ಆ 5 ವರ್ಷಗಳ ಅವಧಿಯಲ್ಲಿ ರೈತರಿಗೆ 13.26ಕೋಟಿ ಸಸಿ ವಿತರಿಸಿದ್ದೆವು. ಈ ಕಾರಣಗಳಿಂದಾಗಿ ಅರಣ್ಯ ಪ್ರದೇಶ ಹೆಚ್ಚಿಸಿದ ರಾಜ್ಯಗಳಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಇದು ನಿಮ್ಮ ಸರಕಾರದ ಕೊಡುಗೆ ಅಲ್ಲ ಎಂದು ಅಂಕಿ-ಅಂಶಗಳನ್ನು ನೀಡಿದರು.

ರಾಜ್ಯಪಾಲರು ತಮ್ಮ ಭಾಷಣದಲ್ಲಿ ನೆರೆ ಪೀಡಿತ ಪ್ರದೇಶದಲ್ಲಿ 1.15ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದೆ ಎಂದಿದ್ದಾರೆ. ವಾಸ್ತವ ಪರಿಸ್ಥಿತಿ ನೋಡಿದರೆ ಶೇ.40ಕ್ಕಿಂತ ಕಡಿಮೆ ಹಣ ಬಿಡುಗಡೆಯಾಗಿದೆ. ಹೀಗಿರುವಾಗ ಮನೆ ನಿರ್ಮಿಸಿದ್ದು ಹೇಗೆ? ಎಂದು ಸಿದ್ದರಾಮಯ್ಯ ಟೀಕಿಸಿದರು.

ಅಂಕಿ-ಅಂಶದಲ್ಲಿ ಲೋಪ: ನೆರೆ ಪರಿಸ್ಥಿತಿಯಿಂದ 1ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಸಿಎಂ ಬಿಎಸ್‌ವೈ 50 ಸಾವಿರ ಕೋಟಿ ರೂ.ಗಳಷ್ಟು ನಷ್ಟ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಕೇಂದ್ರಕ್ಕೆ 33,165 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಮನವಿ ಸಲ್ಲಿಸಲಾಗಿದೆ.
ಆದರೆ, ಕೇಂದ್ರ ಕೇವಲ 1,869 ಕೋಟಿ ರೂ.ಗಳನ್ನು ಎರಡು ಕಂತುಗಳಲ್ಲಿ ಘೋಷಿಸಿದ್ದು, 1,652 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ರಾಜ್ಯ ಸರಕಾರ ನೀಡಿದ ಜಾಹೀರಾತಿನಲ್ಲಿ 2.57 ಲಕ್ಷ ಮನೆಗಳು ಪ್ರವಾಹದಿಂದ ಹಾನಿಯಾಗಿದೆ ಎಂದು ಹೇಳಿದ್ದು, ಸರಕಾರದ ಅಂಕಿ-ಅಂಶಗಳಲ್ಲಿ ಲೋಪದೋಷದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದರು.

ನೆರೆ ಪೀಡಿತ ಪ್ರದೇಶದಲ್ಲಿ ಅಂಗಡಿ, ಮುಂಗಟ್ಟುಗಳನ್ನು ಕಳೆದುಕೊಂಡವರಿಗೆ, ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದವರಿಗೆ ಹಾಗೂ ಬೆಳೆ ಕಳೆದುಕೊಂಡ ಜನರಿಗೆ ಇನ್ನೂ ಪರಿಹಾರ ನೀಡಿಲ್ಲ. ಇನ್ನೂ ಶಾಲಾ ಕೊಠಡಿಗಳನ್ನು ನಿರ್ಮಿಸದ ಕಾರಣ ಶೆಡ್‌ಗಳು, ದೇವಾಲಯಗಳಲ್ಲಿ ಮಕ್ಕಳು ಕಲಿಯಬೇಕಿದ್ದು, ಹೀಗಾದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ? ಎಂದು ಸರಕಾರವನ್ನು ಪ್ರಶ್ನಿಸಿದರು.

‘ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಲಾ ಕೊಠಡಿಗಳ ದುರಸ್ತಿಗೆ 200 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. 6684 ಶಾಲಾ ಕೊಠಡಿಗಳನ್ನು ಪುನರ್ ನಿರ್ಮಾಣ ಕಾಮಗಾರಿಗೆ 758 ಕೋಟಿ ರೂ. ಒದಗಿಸಲಾಗಿದೆ. ಕೂಡಲೇ ಪಠ್ಯ-ಪುಸ್ತಕ ಮುದ್ರಿಸಿ ನೀಡಲಾಗಿದೆ’
-ಎಸ್.ಸುರೇಶ್‌ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ನೆರೆ ಪರಿಹಾರಕ್ಕೆ ಡಿಎನ್‌ಎ ಪರೀಕ್ಷೆ
‘ಬಸವರಾಜ್ ಕಾಂಬ್ಳೆ ಎಂಬ ಬಾಲಕ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ, ಆತನ ಕುಟುಂಬದವರಿಗೆ ಈವರೆಗೂ ಪರಿಹಾರ ತಲುಪಿಲ್ಲ. ಆತನ ಪೋಷಕರು ಪರಿಹಾರ ಕೇಳಿದರೆ ‘ನಿಮ್ಮ ಡಿಎನ್‌ಎ ಪರೀಕ್ಷೆ ಮಾಡಿ ನಂತರ ನೀಡುತ್ತೇವೆ’ ಎಂದು ಅಧಿಕಾರಿಗಳು ಹೇಳುತ್ತಾರಂತೆ. ಮಗನನ್ನು ಕಳೆದುಕೊಂಡವರಿಗೆ ಪರಿಹಾರ ನೀಡಲು ಡಿಎನ್‌ಎ ಪರೀಕ್ಷೆ ಬಿಟ್ಟರೆ ಬೇರೆ ದಾರಿಗಳಿಲ್ಲವೇ?’
-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News