ಪ್ರತಿಭಟನಾಕಾರರಿಂದ ಠಾಣೆಯತ್ತ ಪೆಟ್ರೋಲ್ ಬಾಂಬ್: ಬಸವರಾಜ ಬೊಮ್ಮಾಯಿ ಆರೋಪ

Update: 2020-02-20 15:21 GMT

ಬೆಂಗಳೂರು, ಫೆ.20: ಸಿಎಎ ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಉದ್ರಿಕ್ತರಿಂದ ಪೊಲೀಸ್ ಠಾಣೆಯತ್ತ ಪೆಟ್ರೋಲ್ ಬಾಂಬ್, ಕಲ್ಲು ತೂರಾಟ ಹಾಗೂ ಪೊಲೀಸ್ ಠಾಣೆಗೆ ನುಗ್ಗಲು ಪ್ರಯತ್ನಿಸಿದಾಗ ಅನಿವಾರ್ಯವಾಗಿ ಗೋಲಿಬಾರ್ ನಡೆಸಬೇಕಾಯಿತು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.

ಗುರುವಾರ ವಿಧಾನಪರಿಷತ್‌ನಲ್ಲಿ ಮಂಗಳೂರು ಗೋಲಿಬಾರ್ ಪ್ರಕರಣದ ಕುರಿತು ಉತ್ತರಿಸಿದ ಅವರು, ಪ್ರತಿಭಟನಾಕಾರರು ಗನ್‌ಶಾಪ್‌ಗೆ ನುಗ್ಗಿ ಗನ್ ಹಾಗೂ ಗುಂಡುಗಳನ್ನು ಪಡೆದುಕೊಳ್ಳಲು ಮುಂದಾದರು. ಇಂತಹ ಸಮಯದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಾಠಿಚಾರ್ಜ್, ಅಶ್ರುವಾಯು, ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಕಾರಣ ಗೋಲಿಬಾರ್ ಮಾಡಬೇಕಾಯಿತು ಎಂದು ತಿಳಿಸಿದರು.

'ಮಂಗಳೂರು ಗಲಭೆ ಪೂರ್ವನಿಯೋಜಿತ': ಡಿ.19ರಂದು ಸಿಎಎ ವಿರುದ್ದ ಪ್ರತಿಭಟನೆಗೆ ಎಸ್ಕೆಎಸ್ಸೆಸೆಫ್ ಕರೆ ನೀಡಿತ್ತು. ಆದರೆ, ಆ ದಿನ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಾಗಿದ್ದರಿಂದ ಪೊಲೀಸರ ಮನವಿ ಮೇರೆಗೆ ಆಯೋಜಕರು ಪ್ರತಿಭಟನೆಯನ್ನು ವಾಪಸ್ ಪಡೆದರು. ಆದರೆ, ಎಸ್‌ಡಿಪಿಐನ ರಿಯಾಝ್ ಪರಂಗಿಪೇಟೆ ಎಂಬುವವರು ಜಾಲತಾಣಗಳ ಮೂಲಕ ಪ್ರತಿಭಟನೆಗೆ ಕರೆ ನೀಡಿದರು ಎಂದು ಅವರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮುಖಕ್ಕೆ ಮುಸುಕು ಹಾಕಿಕೊಂಡಿರುವುದು, ಪೊಲೀಸರ ವಾಹನ ಚಲಿಸದಂತೆ ರಸ್ತೆಗೆ ಅಡ್ಡಲಾಗಿ ಕಲ್ಲು ಹಾಕಿರುವುದು, ಸಿಸಿ ಕ್ಯಾಮೆರಾ ಒಡೆದು ಹಾಕಿರುವುದೆಲ್ಲವನ್ನು ಗಮನಿಸಿದರೆ, ಮಂಗಳೂರು ಗಲಭೆ ಪೂರ್ವನಿಯೋಜಿತ ಕೃತ್ಯ ಎನ್ನುವುದರಲ್ಲಿ ಅನುಮಾನವಿಲ್ಲವೆಂದು ಅವರು ತಿಳಿಸಿದರು.

ನ್ಯಾಯಾಂಗ ತನಿಖೆ ಅಗತ್ಯವಿಲ್ಲ: ಬೆಂಗಳೂರಿನಲ್ಲಿ ಕಾವೇರಿ ವಿಚಾರದಲ್ಲಿ ನಡೆದ ಗೋಲಿಬಾರ್ ಪ್ರಕರಣ, 2007ರಲ್ಲಿ ಮಂಗಳೂರಿನ ಮುಲ್ಕಿಯಲ್ಲಿ ನಡೆದ ಗೋಲಿಬಾರ್ ಪ್ರಕರಣ ಸೇರಿದಂತೆ ಮತ್ತಿತರ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸದೆ, ಮ್ಯಾಜಿಸ್ಟ್ರೇಟ್ ತನಿಖೆಗೆ ಒಪ್ಪಿಸಲಾಗಿತ್ತು. ಅದೇ ಪ್ರಕಾರವಾಗಿ ಈ ಪ್ರಕರಣವನ್ನು ಉಡುಪಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಗೆ ಒಪ್ಪಿಸಲಾಗಿದೆ. ಹೀಗಾಗಲೇ ಹೈಕೋರ್ಟ್ ಪ್ರಕರಣದ ಸಂಬಂಧ ವರದಿ ಕೇಳಿದ್ದು, ಶೀಘ್ರದಲ್ಲಿಯೇ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಅವರು ಹೇಳಿದರು.

►ಮಂಗಳೂರು ಪ್ರತಿಭಟನೆಯ ವೇಳೆ ಪೊಲೀಸರು ಪ್ರತಿಭಟನಾಕಾರರತ್ತ ಏಕಾಏಕಿ ಗುಂಡು ಹಾರಿಸಿಲ್ಲ. ಮೊದಲಿಗೆ ಲಾಠಿಚಾರ್ಜ್, ಬಂಧನ, ಆಶ್ರುವಾಯು 106, ರಬ್ಬರ್ ಬುಲೆಟ್ 47, ಗಾಳಿಯಲ್ಲಿ ಗುಂಡು 10, ಎಸ್‌ಎಲ್‌ಆರ್ 36 ಗುಂಡುಗಳನ್ನು ಸಿಡಿಸಲಾಯಿತು. ನಂತರವೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು.
►ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ 1,329 ಕರೆಗಳು ಕಾಸರಗೋಡು, ಮಂಗಳೂರು ಮಾರ್ಗದಲ್ಲಿ ದಾಖಲಾಗಿವೆ. ಇದರಲ್ಲಿ ಸುಮಾರು 373 ಮಂದಿಗೆ ನೋಟಿಸ್ ಕಳಿಸಿ ವಿಚಾರಣೆಗೆ ಹಾಜರಾಗುವಂತೆ ಕೇಳಲಾಗಿದೆ. ಇದರಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು.
►ಸಿಎಎ ಹೆಸರಿನಲ್ಲಿ ಎಸ್‌ಡಿಪಿಐ ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಸದನದಲ್ಲಿ ಹೇಳಿದ್ದಾರೆ. ಆ ಪ್ರಕಾರವಾಗಿ ರಾಜ್ಯದ ಕರಾವಳಿ ಪ್ರದೇಶದಲ್ಲಿ ಈ ಸಂಘಟನೆಗಳು ಸಕ್ರಿಯವಾಗಿದೆ. ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News