ಎಸೆಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳ ಉಚಿತ ಪ್ರಯಾಣಕ್ಕೆ ಕೆಎಸ್ಸಾರ್ಟಿಸಿ ಅವಕಾಶ

Update: 2020-02-20 14:41 GMT

ಬೆಂಗಳೂರು, ಫೆ 20: ಈ ವರ್ಷದ ಎಸೆಸೆಲ್ಸಿ ಪರೀಕ್ಷೆ ಮಾ. 27ರಿಂದ ಆರಂಭವಾಗಲಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

ವಿದ್ಯಾರ್ಥಿಗಳಿಗೆ ನೀಡಲಾಗಿರುವ ಬಸ್‌ಪಾಸ್ ವಾಸಸ್ಥಳದಿಂದ ಶಾಲೆಗೆ ಮಾತ್ರವೇ ಅವಕಾಶ ಇತ್ತು. ಆದರೆ, ಬೇರೆ ಕಡೆಯ ಮಾರ್ಗದಲ್ಲಿ ತೆರಳಲು ಅವಕಾಶ ಇರಲಿಲ್ಲ. ಇದೀಗ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲು ಇತರೆ ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳ ವಾಸಸ್ಥಳದಿಂದ ಎಸೆಸೆಲ್ಸಿ ಪ್ರವೇಶ ಪತ್ರ ತೋರಿಸಿ, ಪರೀಕ್ಷಾ ಕೇಂದ್ರಗಳಿಗೆ ಸರಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಎಸೆಸೆಲ್ಸಿ ಮುಖ್ಯ ಪರೀಕ್ಷೆ ಮಾ.27ರಿಂದ ಎ.9ವರೆಗೆ ರಾಜ್ಯದೆಲ್ಲಡೆ ನಡೆಯಲಿದೆ. ಪರೀಕ್ಷೆ ನಡೆಯುವ ಎಲ್ಲ ದಿನಗಳಲ್ಲೂ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಮತ್ತು ಹಿಂದಿರುಗುವಾಗ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News