ನ್ಯಾಯಯುತ ತೆರಿಗೆ ಪಾಲು ಪಡೆಯಲು ಕೇಂದ್ರದ ವಿರುದ್ಧ ಧ್ವನಿ ಎತ್ತುವುದು ಬೇಡವೇ: ಸಿದ್ದರಾಮಯ್ಯ

Update: 2020-02-20 15:36 GMT

ಬೆಂಗಳೂರು, ಫೆ. 20: ‘ಕೇಂದ್ರಕ್ಕೆ ಕರ್ನಾಟಕ ತೆರಿಗೆ ರೂಪದಲ್ಲಿ 1ರೂ.ನೀಡಿದರೆ 42 ಪೈಸೆ ವಾಪಾಸು ಬರುತ್ತಿದೆ. ಆದರೆ, ಉತ್ತರ ಪ್ರದೇಶಕ್ಕೆ 1.98 ರೂ., ಗುಜರಾತ್‌ಗೆ 2.35ರೂ.ವಾಪಾಸು ನೀಡಲಾಗುತ್ತಿದೆ. ಬಿಹಾರ ಬಡರಾಜ್ಯ, ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ಜಾಸ್ತಿ ಎಂಬ ಕಾರಣಕ್ಕೆ ಹೆಚ್ಚು ಪಾಲು ನೀಡಲಾಗುತ್ತಿದೆ. ಇದು ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವಲ್ಲವೆ?’ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗುರುವಾರ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ‘ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ, ದಿಲ್ಲಿ ನಂತರ ಕರ್ನಾಟಕ ಮೂರನೆ ಸ್ಥಾನದಲ್ಲಿದೆ. ಕೇಂದ್ರ ಬಜೆಟ್‌ನಲ್ಲಿ ನೀಡಬೇಕಾಗಿದ್ದ ಅನುದಾನದಲ್ಲಿ 17 ಸಾವಿರ ಕೋಟಿ ರೂ. ಕಡಿಮೆ ಆಗಿದೆ. ಈ ಬಗ್ಗೆ ರಾಜ್ಯ ಸರಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಜಿಎಸ್ಟಿ ಪಾಲು, ಪ್ರವಾಹ ಪರಿಹಾರ ನಿಧಿ ಸಮರ್ಪಕವಾಗಿ ಬಂದಿಲ್ಲ. ಹೀಗಾದರೆ ರಾಜ್ಯದ ಅಭಿವೃದ್ಧಿ ಆಗುವುದು ಹೇಗೆ?’ ಎಂದು ಕೇಳಿದರು.

‘14ನೆ ಹಣಕಾಸು ಆಯೋಗದ ಪ್ರಕಾರ ರಾಜ್ಯದ ತೆರಿಗೆ ಪಾಲು ಶೇ.42ರಷ್ಟು. ಈ ಬಾರಿ ನಮ್ಮ ಪಾಲಿನ 9 ಸಾವಿರ ಕೋಟಿ ರೂ.ತೆರಿಗೆ ಹಣ ಖೋತಾ ಆಗಿದೆ. 2020-21ನೆ ಸಾಲಿನಲ್ಲಿ 11ಸಾವಿರ ಕೋಟಿ ರೂ.ಗೂ ಅಧಿಕ ಹಣ ಕಡಿಮೆಯಾಗಲಿದೆ. ಒಟ್ಟು 5ವರ್ಷಕ್ಕೆ 60 ಸಾವಿರ ಕೋಟಿ ರೂ.ರಾಜ್ಯದ ಪಾಲಿನ ಹಣ ಕಡಿಮೆಯಾಗುತ್ತೆ. ಇದು ಸದ್ಯದ ನಮ್ಮ ಆರ್ಥಿಕ ಪರಿಸ್ಥಿತಿ’ ಎಂದು ಸಿದ್ದರಾಮಯ್ಯ ಅಂಕಿ-ಅಂಶಗಳನ್ನು ನೀಡಿದರು.

ಅಭಿವೃದ್ದಿ ಸುಳ್ಳೇ: ‘ಬಿಹಾರ, ಉತ್ತರ ಪ್ರದೇಶಗಳೇನೋ ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಗುಜರಾತಿಗೇನಾಗಿದೆ? ಕರ್ನಾಟಕದ ಜನರೇಕೆ ಗುಜರಾತಿನ ಉದ್ಧಾರಕ್ಕೆ ಹಣ ನೀಡಬೇಕು? ಗುಜರಾತ್ ಮಾದರಿ ಹೇಳಿಕೊಂಡೇ ನರೇಂದ್ರ ಮೋದಿಯವರು ಪ್ರಧಾನಿಯಾದರು. ಹಾಗಿದ್ದರೆ ಗುಜರಾತ್ ಮಾದರಿ ಸುಳ್ಳೇ?’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಇದ್ದರೆ ರಾಜ್ಯದಲ್ಲಿ ರಾಮರಾಜ್ಯ ಆಗುತ್ತದೆ ಎಂದು ಲೋಕಸಭಾ ಚುನಾವಣೆಯ ಕಾಲದಲ್ಲಿ ಪ್ರಚಾರ ಮಾಡಿದ್ದೀರಿ. ಇದೇನಾ ರಾಮರಾಜ್ಯ? ನಿಮ್ಮ 25 ಸಂಸದರು ಎಂದಾದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಕ್ಕೆ ದನಿ ಎತ್ತಿದ್ದಾರಾ?’ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

'ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ': ಡಿಸೆಂಬರ್ ಅಂತ್ಯಕ್ಕೆ ಜಿಎಸ್ಟಿ ಸಂಬಂಧ ನೀಡಬೇಕಾದ ಹಣದಲ್ಲಿ ಸುಮಾರು 6,613 ಕೋಟಿ ರೂ.ಬಾಕಿಯಿದೆ. ಜನವರಿ, ಫೆಬ್ರವರಿ ಸೇರಿದರೆ ಇದು 13ಸಾವಿರ ಕೋಟಿ ರೂ.ಮೀರುತ್ತದೆ. ಇತರೆ ಅನುದಾನದಲ್ಲಿ 4,432ಕೋಟಿ ರೂ.ಅನುದಾನವನ್ನು ಕೇಂದ್ರ ಬಾಕಿ ಉಳಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದೀರಿ. ಈ ಉಳಿಕೆ ಅನುದಾನ ನಮ್ಮ ರಾಜ್ಯದ ಹಕ್ಕು. ಇದನ್ನು ಪಡೆಯಲು ಸರಕಾರ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಕೇಳಿದರು.

‘ಸಾಮಾನ್ಯವಾಗಿ ಒಂದು ಹಣಕಾಸು ಆಯೋಗದಿಂದ ಇನ್ನೊಂದು ಹಣಕಾಸು ಆಯೋಗಕ್ಕೆ ಬದಲಾದಾಗ ರಾಜ್ಯದ ತೆರಿಗೆ ಪಾಲು ಹೆಚ್ಚಾಗಬೇಕಿತ್ತು, ದುರಂತವೆಂದರೆ ವರ್ಷ ಕಳೆದಂತೆ ನಮ್ಮ ರಾಜ್ಯಕ್ಕೆ ಈ ಪಾಲು ಕಡಿಮೆಯಾಗುತ್ತಿದೆ. ಇದರ ವಿರುದ್ಧ ಪಕ್ಷಾತೀತವಾಗಿ ಧ್ವನಿ ಎತ್ತಿದರೆ ಮಾತ್ರ ನಮಗೆ ಬರಬೇಕಾದ ನ್ಯಾಯಯುತ ತೆರಿಗೆ ಪಾಲು ಸಿಗಲು ಸಾಧ್ಯ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News