ಶಾಹಿನ್ ಶಾಲೆಯ ವಿರುದ್ಧದ ದೇಶದ್ರೋಹ ಪ್ರಕರಣ ಹಿಂಪಡೆಯಲ್ಲ: ಬಸವರಾಜ ಬೊಮ್ಮಾಯಿ

Update: 2020-02-20 15:57 GMT

ಬೆಂಗಳೂರು, ಫೆ. 20: ಸಿಎಎ ವಿರೋಧಿಸಿ ನಾಟಕ ಮಾಡಿದ್ದರಿಂದ ಬೀದರ್‌ನ ಶಾಹಿನ್ ಶಾಲೆಯ ಆಡಳಿತ ಮಂಡಳಿ, ಮಗುವಿನ ತಾಯಿ ಮೇಲೆ ಹಾಕಿರುವ ದೇಶದ್ರೋಹ ಪ್ರಕರಣವನ್ನು ಹಿಂಪಡೆಯುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಪರಿಷತ್ತಿನಲ್ಲಿ ಊಟದ ವಿರಾಮದ ಬಳಿಕ, ವಿಪಕ್ಷದ ಸದಸ್ಯರು ಸದನದ ಬಾವಿಗಿಳಿದು, ಈ ಪ್ರಕರಣವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಬೊಮ್ಮಾಯಿ, ಈಗಾಗಲೇ ಈ ಕುರಿತು ಸಾಕಷ್ಟು ತನಿಖೆ ಮಾಡಿ, ಪ್ರಮಾಣ ಪತ್ರವನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದೇವೆ. ಕೋರ್ಟ್ ತೀರ್ಪಿನ ಬಳಿಕ ನಾವು ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಪರಿಷತ್ತಿನ ಸದಸ್ಯೆ ಜಯಮಾಲಾ, ಪೊಲೀಸರು ನೀಡಿರುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬೊಮ್ಮಾಯಿ, ನ್ಯಾಯಾಲಯಕ್ಕೆ ನೀಡಿದ ವಿವರ ಸದನದಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಕಾನೂನು ಬಾಹಿರವಾಗಿ ನಾವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನುಡಿದರು.

ಇದಕ್ಕೆ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಆಡಳಿತ ಮಂಡಳಿ, ಮಗುವಿನ ತಾಯಿಯ ಮೇಲೆ 124ಎ ಅಡಿ ಕೇಸ್ ಹಾಕಿದ್ದಾರೆ. ಆದರೆ, ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಪ್ರಧಾನಿಯೊಬ್ಬರೇ ಸರಕಾರವಲ್ಲ. ಇಡೀ ಕ್ಯಾಬಿನೆಟ್ ಸೇರಿದರೆ ಸರಕಾರ. ಹೀಗಾಗಿ, ಇವರ ಮೇಲೆ ಇಂತಹ ದೊಡ್ಡ ಅಪರಾಧ ಹೊರೆಸಿರುವುದು ಅಮಾನವೀಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪಾಟೀಲರ ಮಾತಿನ ನಡುವೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಕೇಂದ್ರದಲ್ಲಿ ನಿಮ್ಮ ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿ ಐಪಿಎಸ್ ಕಾಯ್ದೆಗೆ ತಿದ್ಧುಪಡಿ ತಂದು 124 ಕಾನೂನು ತಿದ್ದುಪಡಿ ಮಾಡಬೇಕಿತ್ತು ಎಂದು ಕುಟುಕಿದರು. ಇದಕ್ಕೆ ಪಾಟೀಲ್, ನಮ್ಮ ಸರಕಾರವಿದ್ದ ವೇಳೆ ಅನೇಕ ಬದಲಾವಣೆ ಮಾಡಲಾಗಿದೆ ಎನ್ನುತ್ತಾ, ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News