ಯಾವುದೇ ಸಮಿತಿಯನ್ನು ರಚಿಸುವುದಿಲ್ಲ: ಬಸವರಾಜ ಬೊಮ್ಮಾಯಿ

Update: 2020-02-20 16:03 GMT

ಬೆಂಗಳೂರು, ಫೆ.20: ಮಂಗಳೂರು ಗೋಲಿಬಾರ್‌ಗೂ ಮುನ್ನ ಕಾನೂನು ಪಾಲಿಸಿದ್ದೇವೆ. ಆದುದರಿಂದಾಗಿ, ಈ ಪ್ರಕರಣವನ್ನು ಯಾವುದೇ ನ್ಯಾಯಾಂಗ ತನಿಖೆ ಅಥವಾ ಸದನ ಸಮಿತಿ ತನಿಖೆ ನಡೆಸುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಪರಿಷತ್‌ನಲ್ಲಿ ಊಟದ ವಿರಾಮದ ಬಳಿಕ ಪರಿಷತ್ತಿನ ಸದಸ್ಯ ಶ್ರೀಕಂಠೇಗೌಡ, ಗೋಲಿಬಾರ್ ಪ್ರಕರಣದ ವಾಸ್ತವವನ್ನು ಜನರಿಗೆ ತಿಳಿಸಬೇಕಿದೆ. ಹೀಗಾಗಿ, ಸದನ ಸಮಿತಿ ರಚನೆ ಮಾಡಿ, ವಾಸ್ತವ ತನಿಖೆಯಾಗಲಿ. ಆ ಮೂಲಕ ನಿಜವನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ನಾವು ಗೋಲಿಬಾರ್‌ಗೂ ಮೊದಲು ಪೊಲೀಸ್ ಸೇವಾ ನಿಯಮಗಳನ್ನು ಪಾಲಿಸಿದ್ದೇವೆ. ಅದನ್ನು ಎಲ್ಲ ನ್ಯಾಯಾಲಯಕ್ಕೆ ಸಲ್ಲಿಸಿದ್ದರಿಂದ ಯಾವುದೇ ಸಮಿತಿ ರಚನೆ ಮಾಡುವುದಿಲ್ಲ ಎಂದರು.

ಸಿಎಎ ಹೋರಾಟಗಾರರಿಗೆ ಹಣ ಬರುತ್ತಿದೆ ಎಂದು ಸಚಿವರು ಆಪಾದಿಸಿದ್ದಾರೆ. ಅದು ಎಲ್ಲಿಂದ ಬರುತ್ತಿದೆ, ಹೇಗೆ ಬರುತ್ತಿದೆ ಎಂದು ಸ್ಪಷ್ಟೀಕರಣ ನೀಡುವಂತೆ ಅಬ್ದುಲ್ ಜಬ್ಬಾರ್ ಒತ್ತಾಯಿಸಿದರು. ಇದೇ ವೇಳೆ ನಸೀರ್ ಅಹ್ಮದ್, ಮಂಗಳೂರಿನ ಗೋಲಿಬಾರ್, ಬೀದರ್‌ನ ಶಾಹಿನ್ ಶಾಲೆ ವಿರುದ್ಧದ ಪ್ರಕರಣದ ವೇಳೆ ತಪ್ಪು ಮಾಡಿದ ಅಧಿಕಾರಿ, ಪೊಲೀಸರು ವರ್ಗಾವಣೆ ಮಾಡಿ ಅಥವಾ ವಜಾ ಮಾಡಿ ಎಂದು ಆಗ್ರಹಿಸಿದರು.

ಸಚಿವ ಬೊಮ್ಮಾಯಿ ಮಾತನಾಡಿ, ಪಿಎಫ್‌ಐ ಖಾತೆಗೆ ಎಲ್ಲಿಂದ ಹಣ ಬರುತ್ತಿದೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇನ್ನು ತಪ್ಪು ಮಾಡಿದ ಅಧಿಕಾರಿಗಳನ್ನು ಕೋರ್ಟ್‌ನಿಂದ ತೀರ್ಪು ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರ ನೀಡಿದರು.

ಪರಿಷತ್ತಿನ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮಂಗಳೂರಿನ ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಿ, ನುಡಿದಂತೆ ನಡೆಯಬೇಕು ಎಂದರು. ಇದಕ್ಕೆ ಸಚಿವರು, ಕೋರ್ಟ್‌ನಲ್ಲಿ ಪ್ರಕರಣವಿದ್ದು, ತೀರ್ಪು ಬಂದ ಬಳಿಕ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News