ಶಿವಮೊಗ್ಗ: ವಕೀಲರಿಗೆ ನೀವು ಪಾಕಿಸ್ತಾನದವರು ಎಂದವನಿಗೆ ಜೈಲು ಶಿಕ್ಷೆ

Update: 2020-02-20 16:16 GMT
ಶಂಕರ್

ಶಿವಮೊಗ್ಗ: ಕೋರ್ಟ್’ನಲ್ಲಿ ಸಾಕ್ಷಿ ಹೇಳಲು ಬಂದು ಕಟಕಟೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ವಕೀಲರಿಗೆ ‘ನೀವು ಪಾಕಿಸ್ತಾನದವರು’ ಎಂದು ಆರೋಪಿಸಿ, ಜೈಲು ಸೇರಿರುವ ಘಟನೆ ಶಿವಮೊಗ್ಗ ನ್ಯಾಯಾಲಯದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಶಿವಮೊಗ್ಗದ 3ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ಸಾಕ್ಷಿ ಹೇಳಲು ಬಂದಿದ್ದ ಭದ್ರಾವತಿ ಸಿದ್ಲಿಪುರದ ಶಂಕರ್ ಎಂಬಾತನನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿತ್ತು. ವಕೀಲ ನಯಾಝ್ ಅಹಮ್ಮದ್ ಅವರು ಪ್ರಕರಣ ಸಂಬಂಧ ಪ್ರಶ್ನೆ ಕೇಳಲು ಆರಂಭಿಸಿದರು. ಈ ವೇಳೆ ಶಂಕರ್, ವಕೀಲ ನಯಾಝ್ ಅಹಮ್ಮದ್ ಅವರಿಗೆ, ನೀವು ಪಾಕಿಸ್ತಾನದವರು ಎಂದಿದ್ದಾನೆ.

ಶಂಕರ್ ಹೀಗೆ ಹೇಳುತ್ತಿದ್ದಂತೆ ಕೋರ್ಟ್ ಕಲಾಪ ನಿಲ್ಲಿಸಿದ ನ್ಯಾಯಾಧೀಶರಾದ ಜ್ಯೋತಿ ಪಾಟೀಲ್, ಕಲಾಪದ ವೇಳೆ ಅನುಚಿತ ವರ್ತನೆ ಮತ್ತು ಕಾರ್ಯಕಲಾಪಕ್ಕೆ ಅಡ್ಡಿ ಉಂಟು ಮಾಡಿದ ಆರೋಪದ ಹಿನ್ನೆಲೆ ಒಂದು ದಿನ ಜೈಲು ಶಿಕ್ಷೆ ವಿಧಿಸಿದರು.

ಘಟನೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ನಯಾಝ್ ಅಹಮ್ಮದ್, ಶಂಕರ್ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡುತ್ತೇನೆ. ಈ ಸಂಬಂಧ ವಕೀಲರ ಸಂಘದ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಇದು ನಮ್ಮ ವೃತ್ತಿಗೆ ತಂದ ಅಗೌರವ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News