'ಪಾಕಿಸ್ತಾನ ಝಿಂದಾಬಾದ್' ಘೋಷಣೆ: ಅಮೂಲ್ಯ ಮನೆಗೆ ವಿಹಿಂಪ ಮುತ್ತಿಗೆ

Update: 2020-02-20 18:37 GMT

ಚಿಕ್ಕಮಗಳೂರು, ಫೆ.20: ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ವಿವಿಧ ಸಂಘಟನೆಗಳು ಆಯೋಜಿಸಿದ್ದ ಸಿಎಎ ಮತ್ತು ಎನ್‍ಆರ್ ಸಿ ಪ್ರತಿಭಟನೆಯಲ್ಲಿ 'ಪಾಕಿಸ್ತಾನ ಝಿಂದಾಬಾದ್' ಎಂದು ಘೋಷಣೆ ಕೂಗಿದ ಕೊಪ್ಪ ಮೂಲದ ವಿದ್ಯಾರ್ಥಿನಿ ಅಮೂಲ್ಯ ಲಿಯೋನ ಅವರ ತಂದೆ ವಾಜೀ ಮನೆಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತೆರಳಿ ಮುತ್ತಿಗೆ ಹಾಕಿದ ಘಟನೆ ಗುರುವಾರ ರಾತ್ರಿ ನಡೆದಿದೆ. 

ಈ ವೇಳೆ ಕಾರ್ಯಕರ್ತರು ಆಕೆಯ ತಂದೆಯ ಹೇಳಿಕೆಯನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದು, ಅವರಿಂದ 'ಭಾರತ್ ಮಾತಾಕೀ ಜೈ' ಎಂದು ಹೇಳಿಸಿದ್ದಲ್ಲದೇ, ಮಗಳಿಗೆ ಜಾಮೀನು ಕೊಡುತ್ತೀರಾ? ವಕೀಲರ ನೇಮಕ ಮಾಡುತ್ತೀರಾ? ಎಂಬಂತಹ ಪ್ರಶ್ನೆಗಳನ್ನು ಕೇಳಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. 

ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವಾಜೀ ಅವರನ್ನು ಸುತ್ತುವರಿದು ಪ್ರಶ್ನೆ ಕೇಳುತ್ತಾ ವಿಡಿಯೋ ಮಾಡಿದ್ದು, ಈ ವೇಳೆ ಅಮೂಲ್ಯ ಅವರ ತಂದೆ ವಾಜೀ ಮಾತನಾಡಿ, ಅಮೂಲ್ಯ ನನ್ನ ಮಗಳು, ಅವಳು ಪಾಕಿಸ್ತಾನದ ಪರ ಘೋಷಣೆ ಕೂಗಿರುವುದನ್ನು ನಾನು ಅಕ್ಷರಶಃ ಸಹಿಸುವುದಿಲ್ಲ. ಆಕೆ ತುಂಬಾ ಹಠದ ಸ್ವಭಾವದವಳಾಗಿದ್ದು, ಆಕೆಗೆ ಎಷು ಬುದ್ಧಿವಾದ ಹೇಳಿದರೂ ತಿದ್ದಿಕೊಳ್ಳುತ್ತಿರಲಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಕಳೆದ ಐದಾರು ದಿನಗಳಿಂದ ಮಗಳು ಅಮೂಲ್ಯ ನಮ್ಮ ಸಂಪರ್ಕದಲ್ಲಿಲ್ಲ. ನಾನು ಹೃದಯ ಸಂಬಂಧಿ ಖಾಯಿಲೆ ಇಂದ ಬಳಲುತ್ತಿದ್ದು, 15 ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದಾಗ ಆಕೆಗೆ ಬುದ್ಧಿವಾದ ಹೇಳಿದ್ದೆ, ಆಗಲೂ ಅಮೂಲ್ಯ ನನ್ನ ಮಾತು ಕೇಳಿಲ್ಲ. ನನ್ನ ಸಹೋದರ ವಿದೇಶದಿಂದ ಬಂದಿದ್ದ ವೇಳೆ ಆತನೂ ಬುದ್ಧಿವಾದ ಹೇಳಿದ್ದ, ಆದರೆ ಯಾರ ಮಾತನ್ನೂ ಕೇಳುತ್ತಿರಲಿಲ್ಲ, ನನ್ನ ಕುಟುಂಬಕ್ಕೂ ಮಾನಸಿಕವಾಗಿ ನೋವುಂಟು ಮಾಡಿದ್ದಾರೆ. ಎಂದು ವಾಜೀ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ನಾನು ಅವಳ ಬಿಡುಗಡೆಗೆ ಯಾವುದೇ ವಕೀಲರನ್ನು ನೇಮಿಸುವುದಿಲ್ಲ, ಮಗಳು ಮಾಡಿರುವ ತಪ್ಪಿಗೆ ಸರಕಾರ ತಕ್ಕ ಶಿಕ್ಷ ನೀಡಲಿ. ಅವಳ ಬಿಡುಗಡೆಗೆ ಯಾವುದೇ ರೀತಿಯ ಜಾಮೀನು ಪಡೆಯಲು ಮುಂದಾಗುವುದಿಲ್ಲ. ಅವಳನ್ನು ಸಮರ್ಥಿಸುವ ಪ್ರಶ್ನೆಯೇ ಇಲ್ಲ. ಇತ್ತೀಚೆಗೆ ಅಮೂಲ್ಯ ಕೆಲ ಹೋರಾಟಗಾರರೊಂದಿಗೆ ಸೇರಿಕೊಂಡು ಸಭೆ, ಸಮಾರಂಭಗಳಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡುತ್ತಿದ್ದಳು. ಇಂತಹ ಮಾತುಗಳನ್ನು ನಾನು ಯಾವತ್ತೂ ಸಹಿಸುತ್ತಿರಲಿಲ್ಲ. ಈ ಸಂಬಂಧ ಆಕೆಗೆ ತಾನು ಸಾಕಷ್ಟು ಬುದ್ಧಿವಾದ ಹೇಳಿದ್ದೇನೆ. ಆದರೆ ಆಕೆ ಕೇಳುತ್ತಿರಲಿಲ್ಲ ಎಂದು ಅಮೂಲ್ಯ ತಂದೆ ಹೇಳಿರುವ ವಿಡಿಯೋ ಅನ್ನು ಸಂಘಪರಿವಾರ ಸಂಘಟನೆಗಳು ವೈರಲ್ ಮಾಡಿದ್ದಾರೆ.

ವಿಡಿಯೋ ಮಾಡಿರುವ ಕಾರ್ಯಕರ್ತರು ಕೊನೆಯಲ್ಲಿ ಅಮೂಲ್ಯ ತಂದೆ ಅವರಿಂದ 'ಭಾರತ್ ಮಾತಾಕೀ ಜೈ' ಎಂದು ಹೇಳಲು ಒತ್ತಾಯ ಮಾಡಿದ್ದು, ವಾಜೀ ಅವರು 'ಭಾರತ್ ಮಾತಾಕೀ ಜೈ' ಎಂದು ಹೇಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News