ಮಾಜಿ ಸಚಿವ ಸಿ.ಚನ್ನಿಗಪ್ಪ ನಿಧನ

Update: 2020-02-21 12:34 GMT

ಬೆಂಗಳೂರು, ಫೆ.21: ಜೆಡಿಎಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಸಿ.ಚನ್ನಿಗಪ್ಪ(61) ಬಹು ಅಂಗಾಂಗ ವೈಫಲ್ಯದಿಂದಾಗಿ ಶುಕ್ರವಾರ ಬೆಳಗ್ಗೆ 8.20ರ ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಒಂದು ವರ್ಷದಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಚನ್ನಿಗಪ್ಪ, ವಿದೇಶದಲ್ಲಿಯೂ ಚಿಕಿತ್ಸೆ ಪಡೆದಿದ್ದರು. ಆದರೂ, ಆರೋಗ್ಯ ಸುಧಾರಿಸಿರಲಿಲ್ಲ. ಮೃತರು ಪತ್ನಿ ಸಿದ್ಧಗಂಗಮ್ಮ, ಪುತ್ರ ಹಾಗೂ ಶಾಸಕ ಗೌರಿಶಂಕರ್, ಮತ್ತೊಬ್ಬ ಪುತ್ರ ಜಿಲ್ಲಾ ಪಂಚಾಯತ್ ಸದಸ್ಯ ವೇಣುಗೋಪಾಲ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಭೈರನಾಯಕನಹಳ್ಳಿಯಲ್ಲಿ 1951ರಲ್ಲಿ ನಂಜಮ್ಮ ಹಾಗೂ ಚೆನ್ನರಾಯಪ್ಪ ದಂಪತಿಗೆ ಜನಿಸಿದ್ದ ಚನ್ನಿಗಪ್ಪ, ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿ, ಬಿ.ಎ, ಬಿ.ಎಡ್ ಪದವೀಧರರಾಗಿದ್ದರು.

ಪೊಲೀಸ್ ಪೇದೆಯಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದ ಚನ್ನಿಗಪ್ಪ, ಆನಂತರ ಸ್ವಯಂ ನಿವೃತ್ತಿ ಪಡೆದುಕೊಂಡು ರಾಜಕೀಯಕ್ಕೆ ಪ್ರವೇಶಿಸಿದ್ದರು. 1994ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಆನಂತರ, ಸತತ ಮೂರು ಬಾರಿ ಕೊರಟಗೆರೆ ಕ್ಷೇತ್ರವನ್ನು ಚನ್ನಿಗಪ್ಪ ಪ್ರತಿನಿಧಿಸಿದ್ದರು.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಚನ್ನಿಗಪ್ಪ ಮೊದಲ ಬಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅರಣ್ಯ, ಗಣಿ ಮತ್ತು ರೇಷ್ಮೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಇದೇ ವೇಳೆ ಅವರ ವಿರುದ್ಧ ಅಂದು ವಿಧಾನಪರಿಷತ್ತಿನ ಸದಸ್ಯರಾಗಿದ್ದ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ, 150 ಕೋಟಿ ರೂ.ಗಣಿ ಲಂಚದ ಆರೋಪ ಮಾಡಿದ್ದು ರಾಜ್ಯರಾಜಕೀಯದಲ್ಲಿ ತೀವ್ರ ಚರ್ಚೆಗೊಳಪಟ್ಟಿತ್ತು.

ಹುಟ್ಟೂರಿನಲ್ಲಿ ಅಂತ್ಯಕ್ರಿಯೆ

ಮಾಜಿ ಸಚಿವ ಸಿ.ಚನ್ನಿಗಪ್ಪ ಅವರ ಅಂತ್ಯಕ್ರಿಯೆಯನ್ನು ಶನಿವಾರ ಅವರ ಹುಟ್ಟೂರಾದ ನೆಲಮಂಗಲ ತಾಲೂಕಿನ ಭೈರನಾಯಕನಹಳ್ಳಿಯಲ್ಲಿರುವ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News