ದೇಶಭಕ್ತಿಯ ಬಗ್ಗೆ ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ: ಕುಮಾರಸ್ವಾಮಿ

Update: 2020-02-21 12:03 GMT

ಬೆಂಗಳೂರು, ಫೆ. 21: ‘ಅಮೂಲ್ಯ ಎಂಬ ಯುವತಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಖಂಡನೀಯ. ಆ ರೀತಿಯ ವರ್ಗಕ್ಕೆ ಸೇರಿದವರ ಬಗ್ಗೆ ಸಂಘಟಕರು ಎಚ್ಚರದಿಂದ ಇರಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.

ಶುಕ್ರವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇವತ್ತು ದೇಶ ಮುಖ್ಯ. ಭಾರತೀಯರಾಗಿ ನಮ್ಮ ದೇಶಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಆಕೆ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾಳೋ ಇಲ್ಲ ಪ್ರಚಾರಕ್ಕಾಗಿ ಮಾಡಿದ್ದಾಳೋ. ಆಕೆಗೆ ಈ ಬಗ್ಗೆ ತಿಳಿವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದರು.

ನಮ್ಮ ಪಕ್ಷದ ಕಾರ್ಯಕರ್ತರಾದ ಇಮ್ರಾನ್ ಸಹ ಕಾರ್ಯಕ್ರಮದ ಸಂಘಟನೆ ಹೊಣೆ ಹೊತ್ತಿದ್ದರು. ಘೋಷಣೆ ಕೂಗಿದ ಕೂಡಲೇ ಆಕೆಯ ಕೈಯಲ್ಲಿದ್ದ ಮೈಕ್ ಕಸಿದುಕೊಂಡಿದ್ದಾರೆ. ಹೀಗಾಗಿ ಸಂಘಟಕರಿಂದ ಆ ರೀತಿಯ ಉದ್ದೇಶಪೂರ್ವಕವಾಗಿ ಪ್ರಯತ್ನ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದರು.

ಮೊದಲು ನಾನು ಭಾರತೀಯ ಎಂಬ ಭಾವನೆ ಇದ್ದಾಗ ಮಾತ್ರ ಹೋರಾಟಕ್ಕೆ ಇತರರು ಕೈಜೋಡಿಸುತ್ತಾರೆ. ಬಿಜೆಪಿ ಈ ರೀತಿಯ ಪ್ರಯತ್ನಗಳಿಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ತಮ್ಮ ಸರಕಾರದ ವೈಫಲ್ಯಗಳನ್ನು ಮುಚ್ಚಲು ಹೊರಟಿದ್ದಾರೆ. ದೇಶಭಕ್ತಿಯ ಬಗ್ಗೆ ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

ಹೋರಾಟಗಾರರು ತ್ರಿವರ್ಣ ಧ್ವಜ ಹಿಡಿದು ಹೋರಾಟ ನಡೆಸಿದ್ದಾರೆಯೇ ಹೊರತು ಪಾಕಿಸ್ತಾನದ ಧ್ವಜವನ್ನಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಹಾರಿದ್ದ ರಾಷ್ಟ್ರಧ್ವಜಕ್ಕಿಂತ ಹತ್ತು ಪಟ್ಟು ಧ್ವಜಗಳು ಇಂದು ಹೋರಾಟದ ಹೆಸರಿನಲ್ಲಿ ಹಾರುತ್ತಿವೆ ಎಂದರು.

ಸಂವಿಧಾನ ಕೊಟ್ಟ ಹಕ್ಕನ್ನು, ಸಂವಿಧಾನದ ಆಶಯಗಳು ಮತ್ತು ದೇಶವನ್ನು ಯಾರಿಂದಲೂ ಛಿದ್ರಗೊಳಿಸಲು ಆಗದು. ಯಾರೋ ಒಬ್ಬರು ಕಿಡಿಗೇಡಿ ಘೋಷಣೆ ಕೂಗಿದ ಮಾತ್ರಕ್ಕೆ ಅದರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News