ಮಾಜಿ ಸಚಿವ ಸಿ.ಚನ್ನಿಗಪ್ಪ ನಿಧನಕ್ಕೆ ಗಣ್ಯರ ಸಂತಾಪ

Update: 2020-02-21 14:02 GMT

ಬೆಂಗಳೂರು, ಫೆ.21: ಮಾಜಿ ಸಚಿವ ಸಿ.ಚನ್ನಿಗಪ್ಪ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಸಿ.ಚನ್ನಿಗಪ್ಪ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ನನ್ನ ಕಟ್ಟಾ ಅಭಿಮಾನಿಯಾಗಿದ್ದರು. ಗ್ರಾಮೀಣ ಭಾಗದಿಂದ ಬಂದ ಜನಪ್ರತಿನಿಧಿಯಾಗಿ ಹಳ್ಳಿಗರ ಬಗ್ಗೆ, ಬಡವರ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡುತ್ತಿದ್ದರು. ಸಾರ್ವಜನಿಕ ಸೇವಕನಾಗಿರುವುದರ ಜೊತೆಗೆ ಶೈಕ್ಷಣಿಕ ರಂಗದಲ್ಲೂ ಸೇವೆ ಸಲ್ಲಿಸಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಮರಿಸಿದ್ದಾರೆ.

ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಜಗದ್ಗುರುಗಳ ಅನನ್ಯ ಭಕ್ತರಾಗಿದ್ದ ಅವರು ನೆಲಮಂಗಲದ ತಮ್ಮ ಸ್ವಂತ ಊರಿನ ಬಳಿ ಆದರ್ಶವಾದ ಇಂಜಿನಿಯರಿಂಗ್ ಕಾಲೇಜನ್ನು ಗುರುಗಳ ಹೆಸರಿನಲ್ಲಿ ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದಾನ ಮಾಡಿದವರು. ಅಷ್ಟೇ ಅಲ್ಲ, ದೇವಸ್ಥಾನಗಳ ನಿರ್ಮಾಣ, ಅನ್ನದಾಸೋಹ ಮೊದಲಾದ ಧಾರ್ಮಿಕ ಸೇವೆಯಲ್ಲಿ ತಮ್ಮ ಕೊಡುಗೆ ಕಾಣಿಕೆ ಇತ್ತವರು ಎಂದು ಅವರು ಹೇಳಿದ್ದಾರೆ.

ಶಾಸಕರಾಗಿ, ಸಚಿವರಾಗಿ ನಾಡಿಗೆ ತಮ್ಮ ಸೇವೆ ಸಲ್ಲಿಸಿದವರು. ಇವರ ನಿಧನದಿಂದ ಗ್ರಾಮೀಣ ಜನರ ಗಟ್ಟಿ ಧ್ವನಿ ಕ್ಷೀಣಿಸಿದಂತಾಗಿದೆ. ನಾನೊಬ್ಬ ನನ್ನ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ ಎಂದು ದೇವೇಗೌಡ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

'ಚನ್ನಿಗಪ್ಪ ನನ್ನ ಸಹೋದ್ಯೋಗಿಯಾಗಿದ್ದವರು, ಬಹಳ ಕಾಲದಿಂದ ಸ್ನೇಹಿತರು. ಅವರ ಸಾವಿನ ಸುದ್ದಿ ಕೇಳಿ ದುಃಖವಾಯಿತು. ಚನ್ನಿಗಪ್ಪ ಅವರ ಕುಟುಂಬ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಚನ್ನಿಗಪ್ಪ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ತುಮಕೂರು ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಚನ್ನಿಗಪ್ಪ, ಪಕ್ಷದ ಬೆಳವಣಿಗೆಯಲ್ಲಿ ಬಹುವಾಗಿ ಶ್ರಮಿಸಿದ್ದರು. ಅವರ ಕುಟುಂಬದವರಿಗೆ ಮತ್ತು ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲೆಂದು ಕೋರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶೋಕ ವ್ಯಕ್ತಪಡಿಸಿದ್ದಾರೆ.

ಜನತಾ ಪರಿವಾರದ ನನ್ನ ಒಡನಾಡಿಯಾಗಿದ್ದ ಚನ್ನಿಗಪ್ಪ, ಜನರ ನಡುವಿನ ರಾಜಕಾರಣಿಯಾಗಿದ್ದರು. ಶಾಸಕರಾಗಿ, ಸಚಿವರಾಗಿ ಅಪಾರ ಜನಾನುರಾಗಿಯಾಗಿದ್ದರು. ನೇರ ನಿಷ್ಠುರವಾದಿಯಾಗಿದ್ದ ಅವರು, ಕೊರಟಗೆರೆ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಗೆದ್ದು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನ ವೈಯಕ್ತಿಕವಾಗಿ ನನಗೆ ದುಃಖ ತಂದಿದೆ. ನೇರ ವ್ಯಕ್ತಿತ್ವದ ಜನಪರ ರಾಜಕಾರಣಿಯನ್ನು ರಾಜ್ಯ ಕಳೆದುಕೊಂಡಂತಾಗಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಸಿ.ಚನ್ನಿಗಪ್ಪ ನಿಧನಕ್ಕೆ ಸಚಿವ ಕೆ.ಸಿ.ನಾರಾಯಣಗೌಡ ಸಂತಾಪ ವ್ಯಕ್ತಪಡಿಸಿದ್ದು, ಅವರ ಕುಟುಂಬದವರಿಗೆ ಮತ್ತು ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲೆಂದು ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News