ಅಗ್ರಿಗೋಲ್ಡ್ ಆಸ್ತಿ ಮುಟ್ಟುಗೋಲಿಗೆ ಸಕ್ಷಮ ಪ್ರಾಧಿಕಾರ ರಚಿಸಿ: ಹೈಕೋರ್ಟ್ ನಿರ್ದೇಶನ

Update: 2020-02-21 12:36 GMT

ಬೆಂಗಳೂರು, ಫೆ.21: ಅಗ್ರಿಗೋಲ್ಡ್ ಕಂಪೆನಿಯ ವಂಚನೆ ಪ್ರಕರಣದಲ್ಲಿ ಸಂಸ್ಥೆಯ ಸ್ಥಿರ ಮತ್ತು ಚರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಾಗೂ ಹೂಡಿಕೆದಾರರ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ತ್ವರಿತಗೊಳಿಸಲು ಪೂರ್ಣಾವಧಿ ಸಕ್ಷಮ ಪ್ರಾಧಿಕಾರಿಯನ್ನು ನೇಮಕ ಮಾಡಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ಮಂಗಳೂರಿನ ಅಗ್ರಿ ಗೋಲ್ಡ್ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಸರಕಾರದ ಪರ ವಾದಿಸಿದ ವಕೀಲ ವಿ. ಶ್ರೀನಿಧಿಯವರು ಸಕ್ಷಮ ಪ್ರಾಧಿಕಾರಿಯ ಕಾರ್ಯಪಾಲನಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಒಟ್ಟು 10 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರು ಇದ್ದು, ಸಮಾರು 1,700 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಈ ಪೈಕಿ 8.62 ಲಕ್ಷ ಹೂಡಿಕೆದಾರರ ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದೆ. ಹಾಲಿ ಸಕ್ಷಮ ಪ್ರಾಧಿಕಾರಿಯು ರಾಮನಗರ ಉಪವಿಭಾಗಾಧಿಕಾರಿಯೂ ಆಗಿದ್ದಾರೆ. ಅವರು ಎರಡೂ ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿರ್ವಹಿಸಬೇಕಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಆಗ, ಇಷ್ಟೊಂದು ದೊಡ್ಡ ವಂಚನೆಯ ಪ್ರಕರಣ, ಲಕ್ಷಾಂತರ ಅರ್ಜಿಗಳು ವಿಲೇವಾರಿ ಮಾಡಬೇಕಿರುವಾಗ ಈ ಪ್ರಕರಣಕ್ಕೆ ಸಿಮೀತವಾಗಿ ಪೂರ್ಣಾವಧಿ ಸಕ್ಷಮ ಪ್ರಾಧಿಕಾರಿಯನ್ನು ನೇಮಕ ಮಾಡಬೇಕು. ಅವರಿಗೆ ಬೇರೆ ಯಾವುದೇ ಆಡಳಿತಾತ್ಮಕ ಜವಾಬ್ದಾರಿಗಳನ್ನು ವಹಿಸಬಾರದು. ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ, ಆಸ್ತಿ ಮುಟ್ಟುಗೋಲು ಹಾಕಿಕೊಂಡು ಅದನ್ನು ಸ್ವಾಧೀನದಲ್ಲಿಟ್ಟುಕೊಳ್ಳುವ ಪ್ರಕ್ರಿಯೆ ಮುಂದುವರೆಸಬೇಕು. ಅರ್ಜಿಗಳ ಇತ್ಯರ್ಥವನ್ನು ತ್ವರಿತಗೊಳಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಸಕ್ಷಮ ಪ್ರಾಧಿಕಾರಿ ಮನವಿ ಮಾಡಬೇಕು. ಅದನ್ನು ವಿಶೇಷ ನ್ಯಾಯಾಲಯ ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ ಮಾ.19ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News