ಪಾಕ್ ಪರ ಘೋಷಣೆ ಕೂಗುವವರನ್ನು ಅಂಡಮಾನ್-ನಿಕೋಬಾರ್ ಜೈಲಿಗೆ ಹಾಕಿ: ವಿ.ಎಸ್.ಉಗ್ರಪ್ಪ

Update: 2020-02-21 13:48 GMT

ಬೆಂಗಳೂರು, ಫೆ. 21: ಪಾಕ್ ಪರ ಘೋಷಣೆ ಕೂಗುವವರನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಇಂಥವರನ್ನು ಪರಪ್ಪನ ಅಗ್ರಹಾರಕ್ಕಿಂತಲೂ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿನ ಜೈಲಿಗೆ ಹಾಕಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರ ಮೂವತ್ತೈದು ಕೋಟಿ ಭಾರತೀಯರು ದೇಶವನ್ನು ಪ್ರೀತಿಸಬೇಕು. ನಮ್ಮನ್ನ ನಾವು ದೇಶಕ್ಕೆ ಸಮರ್ಪಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಯಾವುದೇ ಪ್ರಜೆ ದೇಶದ ವಿರುದ್ಧವಾಗಿ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ಮಾತನಾಡಬಾರದು ಎಂದರು.

ಶತ್ರು ರಾಷ್ಟ್ರ ಪಾಕ್ ಪರ ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧ. ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯ ಸರಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ವಿದ್ಯಾವಂತ ಯುವಕ ಮತ್ತು ಯುವತಿಯರು ಪಾಕ್ ಪರ ಘೋಷಣೆ ಕೂಗುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.

ಕಾಂಗ್ರೆಸ್ ಪಕ್ಷ ಎಂದೂ ಕಾಶ್ಮೀರ ಪ್ರತ್ಯೇಕತೆಗೆ ಬೆಂಬಲ ಸೂಚಿಸಿಲ್ಲ. ಸೂಚಿಸುವುದು ಇಲ್ಲ. ನಮಗೆ ದೇಶ ಮುಖ್ಯ. ಫ್ರೀ ಕಾಶ್ಮೀರ್ ಎಂದರೆ ಅಲ್ಲಿ ತಡೆ ಹಿಡಿದಿದ್ದ ಇಂಟರ್ ನೆಟ್ ಬೇರೆ ಸೌಲಭ್ಯಗಳನ್ನು ನೀಡುವಂತೆ ಒತ್ತಾಯ ಮಾಡಿದ್ದು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಅವರು ಪ್ರತಿಪಾದಿಸಿದರು.

ನಾವು ಸ್ಟಂಟ್ ಮಾಡಲು ಕಾಶ್ಮೀರ ಪರವಾಗಿಲ್ಲ. ಬಿಜೆಪಿಯವರು ಈಗಲೂ ತಮ್ಮ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸುವುದಿಲ್ಲ. ಕಾಂಗ್ರೆಸ್ ರಾಷ್ಟ್ರ ರಕ್ಷಣೆ ವಿಚಾರದಲ್ಲಿ ಯಾವತ್ತು ರಾಜಕೀಯ ಮಾಡುವುದಿಲ್ಲ. ನಾವು ಬಿರಿಯಾನಿ ತಿನ್ನಲು ಹೋಗಿಲ್ಲ. ಜರತಾರಿ ಸೀರೆ ಉಡುಗೊರೆ ನೀಡಿಲ್ಲ ಎಂದು ಉಗ್ರಪ್ಪ ಲೇವಡಿ ಮಾಡಿದರು.

‘ಅಮೂಲ್ಯ ಆಗಲಿ, ಮತ್ಯಾರೇ ಆಗಲಿ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಆಕೆ ಪಾಕ್ ಪರ ಘೋಷಣೆ ಹಾಕಿದ ಬಗ್ಗೆ ಹೆಚ್ಚಿನ ತನಿಖೆ ಆಗಬೇಕು. ದೇಶವಿರೋಧಿ ಚಟುವಟಿಕೆಗೆ ಯಾವುದೇ ವೇದಿಕೆ ಆಗಲಿ ದುರ್ಬಳಕೆ ಆಗಬಾರದು. ದೇಶಭಕ್ತಿ, ದೇಶ ಕಟ್ಟುವ ವಿಚಾರದಲ್ಲಿ ಎಲ್ಲ ಭಾರತೀಯರ ಅಭಿಪ್ರಾಯವೂ ಒಂದೇ’
-ಡಿ.ಕೆ.ಶಿವಕುಮಾರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News