ಸ್ವಾಮೀಜಿಗಳಿಗೆ ಮಾರ್ಗದರ್ಶನ ಮಾಡುವ ಪರಿಸ್ಥಿತಿ ನಿರ್ಮಾಣ: ಜಗದೀಶ್ ಶೆಟ್ಟರ್ ವಿಷಾದ

Update: 2020-02-21 13:21 GMT

ಹುಬ್ಬಳ್ಳಿ, ಫೆ.21: ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿಚಾರ ಕೋರ್ಟ್‌ನಲ್ಲಿದೆ. ಇದರ ಬಗ್ಗೆ ನ್ಯಾಯಪೀಠವು ತೀರ್ಮಾನ ಕೈಗೊಳ್ಳುತ್ತದೆ. ಸ್ವಾಮೀಜಿಗಳು ನಮಗೆ ಮಾಗದರ್ಶನ ಮಾಡಬೇಕಾಗಿತ್ತು. ಆದರೆ, ಈಗ ನಾವೇ ಸ್ವಾಮೀಜಿಗಳಿಗೆ ಮಾರ್ಗದರ್ಶನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿಚಾರವಾಗಿ ಫೆ.23ರಂದು ಸತ್ಯದರ್ಶನ ಸಭೆ ನಡೆಯುತ್ತಿದ್ದು, ಆ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ. ಹೀಗಾಗಿ, ಆ ಸಭೆಗೆ ನಾನು ಹೋಗುತ್ತಿಲ್ಲ. ಅಲ್ಲದೆ, ಉತ್ತರಾಧಿಕಾರಿ ನೇಮಕ ವಿಚಾರ ಕೋರ್ಟ್‌ನಲ್ಲಿರುವಾಗ ಈ ವಿವಾದ ಈಗ ಯಾಕೆ ಭುಗಿಲೆದ್ದಿದೆ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.

ನೇಮಕದ ವಿವಾದದ ಬಗ್ಗೆ ಹೆಚ್ಚಿಗೆ ಮಾತನಾಡಿದರೆ ನ್ಯಾಯಾಂಗ ನಿಂದನೆ ಆಗುತ್ತದೆ. ನ್ಯಾಯಪೀಠವೂ ಈ ವಿವಾದದ ಕುರಿತು ಸೂಕ್ತ ತೀರ್ಪು ನೀಡಲಿದೆ ಎಂದು ಹೇಳಿದರು.

ಏನಿದು ವಿವಾದ: ದಿಂಗಾಲೇಶ್ವರ ಸ್ವಾಮೀಜಿಗಳು ತಾವೇ ಮೂರು ಸಾವಿರ ಮಠದ ಉತ್ತರಾಧಿಕಾರಿ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಮಠದ ಕೆಲ ಭಕ್ತರು ಆರೋಪಿಸಿದ್ದಾರೆ. ಅಲ್ಲದೆ, ಕೆಲವರು ದಿಂಗಾಲೇಶ್ವರ ಸ್ವಾಮೀಜಿಗೆ ಗೂಂಡಾ ಎಂಬ ಪದದಲ್ಲಿ ನಿಂದಿಸಿದ್ದಾರೆ. ಇನ್ನು ಕೆಲ ಮಠದ ಭಕ್ತರು ಮೂರು ಸಾವಿರ ಮಠಕ್ಕೆ ಮಲ್ಲಿಕಾರ್ಜುನ ಸ್ವಾಮೀಜಿಯನ್ನು ಉತ್ತರಾಧಿಕಾರಿಯಾಗಿ ನೇಮಿಸಬೇಕೆಂಬುದು ಆಗ್ರಹವಾಗಿದೆ. ಹೀಗಾಗಿ, ಈ ಆರೋಪದಿಂದ ಮುಕ್ತವಾಗಲು ಮಠದ ಉತ್ತರಾಧಿಕಾರಿ ನೇಮಕದಿಂದ ಹಿಂದೆ ಸರಿಯುತ್ತಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News