ಬೆಳಗಾವಿಯ ಮದರಸಾದಲ್ಲಿ ಹಿಂದೂ-ಮುಸ್ಲಿಮರ ಸಾಮೂಹಿಕ ವಿವಾಹ

Update: 2020-02-21 14:47 GMT
ಸಾಂದರ್ಭಿಕ ಚಿತ್ರ

ಬೆಳಗಾವಿ, ಫೆ.21: ರಾಜ್ಯದಲ್ಲಿ ಇದೇ ಮೊದಲ ಬಾರಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಕ್ರಾಸ್ ಬಳಿ ಇರುವ ಮದರಸಾ ಎ ಅರಬಿಯಾ ಅನ್ವಾರುಲ್ ಉಲೂಮದಲ್ಲಿ 101 ಹಿಂದೂ-ಮುಸ್ಲಿಂ ನವದಂಪತಿಗಳ ಸಾಮೂಹಿಕ ವಿವಾಹ ಜರುಗಿತು.

ಮದರಸಾ ಎ ಅರಬಿಯಾ ಅನ್ವಾರುಲ್ ಉಲೂಮದಲ್ಲಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ನವ ಜೋಡಿಗಳಿಗೆ ಉಡುಗೊರೆಯಾಗಿ ಪಾತ್ರೆ, ತಿಜೋರಿ, ಫ್ರಿಡ್ಜ್, ಹೊಲಿಗೆ ಯಂತ್ರ, ಚೇರ್‌ಗಳು, ಗಾದಿಯನ್ನು ನೀಡಲಾಯ್ತು. ಈ ಎಲ್ಲ ಸಾಮಗ್ರಿಗಳ ಜತೆಗೆ ಕೊನೆಯಲ್ಲಿ ನವದಂಪತಿಗಳಿಗೆ ಕುರ್ಆನ್ ಪ್ರತಿ ನೀಡಲಾಯಿತು.

ಹಿಂದೂ-ಮುಸ್ಲಿಂ ಭಾವೈಕ್ಯತೆ ಎತ್ತಿ ಹಿಡಿಯುವ ಉದ್ದೇಶದಿಂದ ಈ ಮದುವೆಯನ್ನ ವಿವಿಧ ಮುಸ್ಲಿಂ ಸಂಘಟನೆಗಳು ಹಾಗೂ ಇಸ್ಸಾ ಫೌಂಡೇಷನ್ ವತಿಯಿಂದ ನಡೆಸಲಾಯಿತು. 25 ಹಿಂದೂ ನವ ಜೋಡಿಗಳು ಇಲ್ಲಿ ಹೊಸ ಬಾಳಿಗೆ ಹೆಜ್ಜೆಯನ್ನಿಟ್ಟರು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮದರಸಾವೊಂದರಲ್ಲಿ ಹಿಂದೂ ಧರ್ಮದವರ ಮದುವೆಯನ್ನು ಮಾಡಿ ಇತಿಹಾಸ ಸೃಷ್ಟಿಗೆ ಕಾರಣವಾಯಿತು. ಹಾಗೆಯೇ 76 ಮುಸ್ಲಿಂ ನವ ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹಿಂದೂ ಜೋಡಿಗಳ ಮದುವೆಯನ್ನು ಸ್ಥಳೀಯ ಸ್ವಾಮೀಜಿಗಳು ಹಿಂದೂ ಸಂಪ್ರದಾಯದಂತೆಯೇ ನೆರವೇರಿಸಿದರು. ಮುಸ್ಲಿಂ ಜೋಡಿಗಳು ಮೌಲವಿಗಳ ಸಮ್ಮುಖದಲ್ಲಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು.

ಮೌಲವಿಗಳು ಹಾಗೂ ಮುಸ್ಲಿಂ ಮುಖಂಡರು ಸೇರಿ ಇಂತಹದ್ದೊಂದು ಹೊಸ ಪದ್ದತಿಗೆ ನಾಂದಿ ಹಾಡಿದ್ದು, ಇವರ ಬೆನ್ನಿಗೆ ಹಿಂದೂ ಧರ್ಮದವರು ನಿಂತರು. ಈ ಮೂಲಕ ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ರವಾನಿಸಿದ್ದಾರೆ. ಕಾರ್ಯಕ್ರಮಕ್ಕೆ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವು ರಾಜಕೀಯ ಮುಖಂಡರು, ವಿವಿಧ ಮಠಾಧೀಶರು ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News