'ಪಾಕಿಸ್ತಾನ್ ಝಿಂದಾಬಾದ್' ಘೋಷಣೆಗೆ ಖಂಡನೆ: ಚಿಕ್ಕಮಗಳೂರಿನ ಹಲವಡೆ ಪ್ರತಿಭಟನೆ

Update: 2020-02-21 14:54 GMT

ಚಿಕ್ಕಮಗಳೂರು, ಫೆ.21: ಸಿಎಎ, ಎನ್‍ಆರ್ ಸಿ ವಿರುದ್ಧ ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶದಲ್ಲಿ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿರುವ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ಅವರನ್ನು ಪೊಲೀಸರು ಬಂಧಿಸಿರುವ ಬೆನ್ನಲ್ಲೇ, ಇತ್ತ ಜಿಲ್ಲೆಯ ಕೊಪ್ಪದ ಶಿವಪುರ ಗ್ರಾಮದಲ್ಲಿ ಆಕೆಯ ಮನೆಯ ಮೇಲೆ ಸಂಘಪರಿವಾರದ ಕಾರ್ಯಕರ್ತರು ಗುರುವಾರ ರಾತ್ರಿ ದಾಳಿ ನಡೆಸಿರುವ ಘಟನೆ ನಡೆದಿದೆ. ಅಲ್ಲದೇ, ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಶುಕ್ರವಾರ ಬೆಳಗ್ಗೆ ಕೊಪ್ಪ ತಾಲೂಕಿನಾದ್ಯಂತ ಸಂಘಪರಿವಾರ ಸೇರಿದಂತೆ ಕೆಲ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಿದ್ದರು. ಶುಕ್ರವಾರ ಬೆಳಗ್ಗೆ ಕೆಲ ಯುವಕರ ಗುಂಪು ಅಮೂಲ್ಯ ಮನೆ ಮುಂದೆಯೂ ಧರಣಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಅಹಿತಕರ ಘಟನೆಗಳಿಗೆ ಪೊಲೀಸರು ಅವಕಾಶ ನೀಡದೇ ಧರಣಿ ನಿರತರನ್ನು ಸಮಾಧಾನ ಪಡಿಸಿ ಕಳಿಸಿದ್ದಾರೆಂದು ತಿಳಿದು ಬಂದಿದೆ.

ಕೊಪ್ಪ ಪಟ್ಟಣದಲ್ಲಿ ಹನುಮೋತ್ಸವ ಸೇವಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ಅಮೂಲ್ಯ ಹೇಳಿಕೆ ಖಂಡಿಸಿ ಮೆರವಣಿಗೆ ನಡೆಸಿ ಅಮೂಲ್ಯ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೊಪ್ಪ ತಾಲೂಕು ಸೇರಿದಂತೆ ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ನಗರದಲ್ಲಿ ಶ್ರೀರಾಮಸೇನೆ ಹಾಗೂ ಸಂಘಪರಿವಾರದ ಸಂಘಟನೆಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

ದೂರು ದಾಖಲು

ಗುರುವಾರ ಬೆಂಗಳೂರಿನಲ್ಲಿ ಅಮೂಲ್ಯ ಲಿಯೋನಾ ಅವರು ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ ಬೆನ್ನಲ್ಲೇ  ಕೊಪ್ಪ ಪಟ್ಟಣ ಸಮೀಪದಲ್ಲಿರುವ ಅಮೂಲ್ಯ ಅವರ ತಂದೆ ವಾಜಿ ನರೋನ್ಹಾ ಅವರ ಮನೆ ಮೇಲೆ ಸಂಘಪರಿವಾರದ ಕಾರ್ಯಕರ್ತರೆನ್ನಲಾದ ಸುಮಾರು 25 ಯುವಕರ ಗುಂಪು ದಾಳಿ ನಡೆಸಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಲ್ಲು, ಇಟ್ಟಿಗೆಗಳನ್ನು ಅಮೂಲ್ಯ ಮನೆಯತ್ತ ತೂರಿದ್ದಾರೆ ಎನ್ನಲಾಗಿದೆ. ಕಲ್ಲಿನ ದಾಳಿ ವೇಳೆ ಅಮೂಲ್ಯ ತಂದೆ ವಾಜೀ ನರೋನ್ಹಾ ಹಾಗೂ ಅವರ ಪತ್ನಿ ಮನೆಯಲ್ಲಿದ್ದು, ದಾಳಿಯಿಂದಾಗಿ ಮನೆಯ ಕಿಟಕಿ ಗಾಜುಗಳು, ಹೂವಿನ ಕುಂಡಗಳು ಪುಡಿಯಾಗಿವೆ. ಘಟನೆಯಿಂದ ಭೀತಿಗೊಳಗಾದ ಅಮೂಲ್ಯ ತಂದೆ ತಾಯಿ ಮನೆಯಿಂದ ಹೊರಬಾರದೆ ಮನೆಯಲ್ಲೇ ಇದ್ದರೆಂದು ತಿಳಿದು ಬಂದಿದೆ.

ಘಟನೆ ಸಂಬಂಧ ಪೊಲೀಸರು ಅಮೂಲ್ಯಳ ಮನೆಯನ್ನು ಪರಿಶೀಲಿಸಿದ್ದು, ವಾಜೀ ಅವರಿಂದ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ವಾಜೀ ಅವರ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ 143, 144, 148, 447, 427, 504, 506 ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.

ಅಮೂಲ್ಯ ಮನೆಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಶಿವಪುರದಲ್ಲಿರುವ ಅಮೂಲ್ಯ ಮನೆಗೆ ಪೊಲೀಸ್ ಭದ್ರತೆ ನೀಡಿದ್ದು, ಆಕೆಯ ಹೆತ್ತವರಿಗೂ ರಕ್ಷಣೆ ನೀಡಿದ್ದಾರೆಂದುತಿಳಿದು ಬಂದಿದೆ.

ಅಮೂಲ್ಯ ಮಲೆನಾಡಿಗೆ ಕಪ್ಪುಚುಕ್ಕಿಯಾಗಿದ್ದಾಳೆ. ದೇಶದ್ರೋಹಿ ಹೇಳಿಕೆ ನೀಡುವ ಮೂಲಕ ಕುವೆಂಪು ಹುಟ್ಟಿದ ಮಲೆನಾಡಿಗೆ ಅವಮಾನ ಮಾಡಿದ್ದಾಳೆ. ಅಮೂಲ್ಯಳಿಗೆ ಗಲ್ಲುಶಿಕ್ಷೆ ಆಗಬೇಕು.
- ಡಿ.ಎನ್.ಜೀವರಾಜ್, ಮಾಜಿ ಸಚಿವ 

ಅಮೂಲ್ಯಾಳಿಗೆ ಯಾರೋ ಪ್ರಚೋದನೆ ನೀಡಿದ್ದಾರೆ. ಅದರ ಬಗ್ಗೆ ತನಿಖೆಯಾಗಬೇಕು. ಸಭೆಗಳಲ್ಲಿ ಆಕೆಯ ಮಾತುಗಳು ನನಗೆ ಹಿಡಿಸುತ್ತಿರಲಿಲ್ಲ. ಹೀಗೆಲ್ಲಾ ಮಾತಾಡಿದರೆ ಸಿಕ್ಕಿ ಬೀಳುತ್ತಿ ಎಂದು ಬುದ್ಧಿ ಹೇಳಿದ್ದೆ. ಆದರೆ ಆಕೆ ಕೇಳುತ್ತಿರಲಿಲ್ಲ, ನಿನಗೆ ವಿಧಿಯೇ ಬುದ್ಧಿ ಕಲಿಸುತ್ತದೆ ಎಂತಲೂ ಹೇಳಿದ್ದೆ. ನನ್ನ ಮನಸಿಗೆ ಬೇಜಾರು ಮಾಡಿದವರು ಯಾರೂ ಉಳಿದಿಲ್ಲ. ಮಗಳಿಗೂ ಅಂತದ್ದೇ ಸ್ಥಿತಿ ಬರುತ್ತದೆ. ಅವರಿಗೆ ಜನರೇ ಬುದ್ಧಿ ಕಲಿಸುತ್ತಾರೆ.
- ವಾಜೀ ನರೋನ್ಹಾ, ಅಮೂಲ್ಯ ತಂದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News