'ದೇಶದ್ರೋಹ' ಪ್ರಕರಣ ಪ್ರಶ್ನಿಸಿ ಸುಪ್ರೀಂ ಮೆಟ್ಟಲೇರಿದ ಬೀದರ್ ನ ಶಾಹೀನ್ ಸಂಸ್ಥೆ

Update: 2020-02-21 15:33 GMT

ಹೊಸದಿಲ್ಲಿ,ಫೆ.21: ಪ್ರಧಾನಿ ಮೋದಿಯನ್ನು ಕೆಟ್ಟದಾಗಿ ಬಿಂಬಿಸಲಾಗಿತ್ತೆಂದು ಆರೋಪಿಸಲಾದ ಸಿಎಎ, ಎನ್‌ಆರ್‌ಸಿ ವಿರೋಧಿ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಬೀದರ್‌ನ ಶಾಹೀನ್ ಶಾಲಾ ಆಡಳಿತದ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಗುರುವಾರ ಸುಪ್ರೀಂಕೋರ್ಟ್‌ಗೆ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ದೇಶದ್ರೋಹದ ಕಾನೂನನ್ನು ಸರಕಾರವು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಮರ್ಪಕ ಕಾರ್ಯತಂತ್ರವನ್ನು ರೂಪಿಸಲು ನಿರ್ದೇಶನ ನೀಡುವಂತೆಯೂ ಅವರು ಅರ್ಜಿಯಲ್ಲಿ ಕೋರಿದ್ದಾರೆ. ಭಾರತೀಯ ದಂಡ ಸಂಹಿತೆಯ 124ಎ ಹಾಗೂ 153-ಎ ಸೆಕ್ಷನ್‌ಗಳಡಿ ಶಾಹೀನ್‌ ಶಾಲೆಯ ಪ್ರಾಂಶುಪಾಲ ಹಾಗೂ ಇತರ ಸಿಬ್ಬಂದಿಯ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ನ್ನು ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

‘ಶಾಲಾ ಆಡಳಿತ, ಶಿಕ್ಷಕಿ ಹಾಗೂ ವಿದ್ಯಾರ್ಥಿನಿಯ ವಿಧವೆ ಪಾಲಕಿಯ ವಿರುದ್ಧದ ದೇಶದ್ರೋಹದ ಆರೋಪಗಳಿಗೆ ಸಂಬಂಧಿಸಿ ದಾಖಲಿಸಲಾದ ಎಫ್‌ಐಆರ್ ಅನ್ನು ರದ್ದುಪಡಿಸುವಂತೆ ಕೇಂದ್ರ ಹಾಗೂ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಪೊಲೀಸರು ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ಸಾಕಷ್ಟು ಟೀಕೆಗೊಳಗಾಗಿದೆಯೆಂದು ಅವರು ತಿಳಿಸಿದ್ದಾರೆ.

ಸಮವಸ್ತ್ರಧಾರಿ ಪೊಲೀಸರು ಶಿಶು ಕಲ್ಯಾಣ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆಂಬ ಶಾಲಾ ಪ್ರಾಂಶುಪಾಲ ಆರೋಪವನ್ನು ಭಯಾನಾ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಶಾಲಾಡಳಿತದ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದು ಸಂವಿಧಾನದ 21ನೇ ವಿಧಿ (ಬದುಕುವ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ರ)ಯ ಉಲ್ಲಂಘನೆಯಾಗಿದೆ ಎಂದವರು ಹೇಳಿದ್ದಾರೆ.

ನಾಲ್ಕನೆ, ಐದನೆ ಹಾಗೂ ಆರನೆ ತರಗತಿಯ ವಿದ್ಯಾರ್ಥಿಗಳು ಜನವರಿ 21ರಂದು ಸಿಎಎ-ಎನ್‌ಆರ್‌ಸಿ ವಿರೋಧಿ ನಾಟಕ ದಲ್ಲಿ ಪ್ರಧಾನಿ ಮೋದಿಯವರನ್ನು ನಿಂದಿಸಿದ್ದಾರೆಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತ ನೀಲೇಶ್ ಎಂಬವರು ಜನವರಿ 26ರಂದು ಪೊಲೀಸರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News