ಪಾಕ್ ಪರ ಘೋಷಣೆ ಕೂಗುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು: ಝಮೀರ್ ಅಹ್ಮದ್ ಖಾನ್

Update: 2020-02-21 15:37 GMT

ಬೆಂಗಳೂರು, ಫೆ.21: ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದವರಿಗೆ ಜೀವಾವಧಿ ಶಿಕ್ಷೆಯಾಗಲಿ. ಒಂದು ವೇಳೆ ಉದ್ದೇಶಪೂರ್ವಕವಾಗಿ ಇಂತಹ ಘೋಷಣೆಗಳನ್ನು ಕೂಗಿದ್ದರೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಅಸದುದ್ದೀನ್ ಒವೈಸಿ ನಿನ್ನೆ ಸ್ವಾತಂತ್ರ ಉದ್ಯಾನವನದಲ್ಲಿ ಪಾಲ್ಗೊಂಡಿದ್ದ ಸಿಎಎ, ಎನ್‌ಆರ್‌ಸಿ ವಿರೋಧಿ ಕಾರ್ಯಕ್ರಮದಲ್ಲಿ ಯುವತಿ ಅಮೂಲ್ಯ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಏನೋ ಒಂದು ಬಾರಿ ಹೇಳಿದ್ದರೆ ಬಾಯಿ ತಪ್ಪಿ ಹೇಳಿರಬಹುದು ಎಂದು ಭಾವಿಸಬಹುದಿತ್ತು. ಆದರೆ, ಒಂದೇ ಘೋಷಣೆಯನ್ನು ಮೂರು ಬಾರಿ ಹೇಳಿದ್ದಾರೆ. ವೇದಿಕೆ ಮೇಲೆ ಇದ್ದವರು ಘೋಷಣೆ ಕೂಗದಂತೆ ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಆಕೆ ಸುಮ್ಮನಾಗಲಿಲ್ಲ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಝಮೀರ್ ಹೇಳಿದರು.

ಪಾಕಿಸ್ತಾನದ ಪರವಾಗಿ ಆಕೆ ಘೋಷಣೆ ಕೂಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆಕೆ ಭಾಷಣ ಮಾಡಿದ ಎರಡು, ಮೂರು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೆ. ಆಗ ಆಕೆ ಈ ರೀತಿ ಮಾಡಿರಲಿಲ್ಲ. ನಾಯಂಡನಹಳ್ಳಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಆಹ್ವಾನ ನೀಡದೆ ಇದ್ದರೂ ಸ್ವಯಂ ಪ್ರೇರಿತವಾಗಿ ಆಕೆ ಬಂದಿದ್ದಳು ಎಂದು ಅವರು ತಿಳಿಸಿದರು.

ಉದ್ದೇಶಪೂರ್ವಕವಾಗಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಮೂಲ್ಯ ಹಾಗೂ ಕಾಂಗ್ರೆಸ್ ನಡುವೆ ಯಾವುದೇ ಸಂಬಂಧವಿಲ್ಲ. ಆಕೆಯ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸಿ, ಕಾನೂನು ಪರ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News